ಹದಗೆಟ್ಟ ರಸ್ತೆಯಿಂದಾಗಿ ಹೈರಾಣಾದ ವಿದ್ಯಾರ್ಥಿಗಳ ಪಾಲಕರು ಹಾಗೂ ಆಟೋ ಚಾಲಕರು ನಡು ರಸ್ತೆಯಲ್ಲಿ ಧಿಕ್ಕಾರ ಕೂಗಿ ಕೆಸರು ತುಂಬಿದ ತಗ್ಗು ಗುಂಡಿಗಳಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಗದಗ ನಗರದ ಸಂಭಾಪೂರ ರಸ್ತೆಯ ಬಾಲವಿನಾಯಕ ಶಾಲೆ ಬಳಿ ನಡೆದಿದೆ. ಸಂಭಾಪೂರ ಗ್ರಾಮಕ್ಕೆ ತೆರಳೋ ಮಾರ್ಗದಲ್ಲಿ ಬಾಲವಿನಾಯಕ ಶಾಲೆ ಇದ್ದು ಈ ಶಾಲೆಗೆ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರ್ತಾರೆ. ಆದ್ರೆ ಹದಗೆಟ್ಟ ರಸ್ತೆಯಿಂದಾಗಿ ವಿದ್ಯಾರ್ಥಿಗಳು ಹೈರಾಣಾಗಿ ಹೋಗಿದ್ದಾರೆ. ಈ ರಸ್ತೆಯಲ್ಲಿ ಓಡಾಡಬೇಕಂದ್ರೆ ಜೀವ ಕೈಯ್ಯಲ್ಲಿ ಹಿಡಿದು ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ತುಂಬೆಲ್ಲಾ ತಗ್ಗು ಗುಂಡಿಗಳೇ ತುಂಬಿಕೊಂಡಿದ್ದು ಮಳೆಯಾದ್ರೆ ಸಾಕು ನರಕ ದರ್ಶನವಾಗತ್ತೆ. ರಸ್ತೆ ಯಾವುದು, ತಗ್ಗು ಗುಂಡಿ ಯಾವುದು ಅನ್ನೋದೇ ಗೊತ್ತಾಗದ ಪರಿಸ್ಥಿತಿ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಶಾಲಾ ಬಸ್, ಆಟೋ, ದ್ವಿಚಕ್ರ ವಾಹನ, ಸೈಕಲ್ ಮೂಲಕ ಕರೆದೊಯ್ತಾರೆ. ಹೀಗೆ ಕರೆದೊಯ್ಯುವಾಗ ಹಲವು ಬಾರಿ ಸೈಕಲ್, ದ್ವಿಚಕ್ರ ವಾಹನಗಳು ಬಿದ್ದು ಗಾಯಗಳಾಗಿವೆ ಅಂತಾ ಪೋಷಕರು ಆಕ್ರೋಶ ಹೊರ ಹಾಕಿದ್ರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಸ್ತೆ ಸರಿಪಡೊಸಬೇಕೆಂದು ಆಗ್ರಹಿಸಿದ್ರು.