ನಾವು ಏನು ಎಂದು ನಮಗಿಂತ ಚೆನ್ನಾಗಿ ಗೊತ್ತಿರುವುದು ನಮ್ಮ ಫ್ರೆಂಡ್ಸ್ಗೆ ಮಾತ್ರ. ನಗುವಾಗ ಜೊತೆಗೂಡುವ, ಅಳುವಾಗ ಹೆಗಲು ಕೊಡುವ ಈ ಸಂಬಂಧ ಎಲ್ಲಾ ಬಂಧಗಳನ್ನು ಮೀರಿದ್ದು.ಎಲ್ಲಾ ಬಂಧವೂ ನಮ್ಮಿಂದ ಏನೋ ನಿರೀಕ್ಷಿಸುತ್ತದೆ, ಆದರೆ ಏನೂ ನಿರೀಕ್ಷಿಸದೆ ಬರುವುದು ಸ್ನೇಹವೊಂದೇ.ನನಗೆ ನಿನ್ನ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇರಬಹುದು, ಆದರೆ ಅದನ್ನು ಎದುರಿಸಲು ನಿನ್ನೊಬ್ಬನೇ ಖಂಡಿತ ಬಿಡಲ್ಲ ಅಂತ ಬರುವವರೇ ಫ್ರೆಂಡ್ಸ್. ಸುಖದಲ್ಲಿ ನಮ್ಮ ಜೊತೆಗೆ ಇರುವವರು ಸ್ನೇಹಿತರಲ್ಲ, ಕಷ್ಟಾ ಅಂತ ಬಂದಾಗ ಯಾರು ಜೊತೆಗಿರುತ್ತಾರೋ ಅವರೇ ನಿಜವಾದ ಸ್ನೇಹಿತರು.
ಭಾರತದಲ್ಲಿ ಸ್ನೇಹಿತರ ದಿನ ಯಾವಾಗ?
ಭಾರತ, ಅಮೇರಿಕಾ, ಬಾಂಗ್ಲಾದೇಶ, ಮಲೇಷ್ಯಾ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 4̈(ಇಂದು) ರಂದು ಪ್ರೆಂಡ್ಶಿಪ್ ಡೇ ಆಚರಿಸಲಾಗುತ್ತಿದೆ.
ಸ್ನೇಹಿತರ ದಿನ ಆರಂಭಿಸಿದವರು
20ನೇ ಶತಮಾನದ ಆರಂಭದಲ್ಲಿ ಹಾಲ್ಮಾರ್ಕ್ ಕಾರ್ಡ್ಗಳು ಮತ್ತು ಅದರ ಸೃಷ್ಟಿಕರ್ತ ಜಾಯ್ಸ್ ಹಾಲ್ ಸ್ನೇಹವನ್ನು ಸ್ಮರಿಸಲು ಒಂದು ದಿನ ಬೇಕು ಎಂಬ ಉದ್ದೇಶದಿಂದ ಈ ದಿನದ ಆಚರಣೆಯ ಪ್ರಸ್ತಾಪ ಮಾಡಿದರು ಎಂದು ಹೇಳಲಾಗುತ್ತದೆ. ಇದು ಅಂತರರಾಷ್ಟ್ರೀಯ ಸ್ನೇಹಿತರ ದಿನವಾಗಿ ಮುಂದುವರಿಯಿತು ಎಂಬುದು ಕೆಲವರು ಕಡೆ ಉಲ್ಲೇಖವಾಗಿದೆ.
ಫ್ರೆಂಡ್ಶಿಪ್ ಡೇ ಇತಿಹಾಸ
ಸ್ನೇಹಿತರ ದಿನದ ಇತಿಹಾಸವನ್ನು ಕೆದಕುತ್ತಾ ಹೊರಟರೆ ನಮಗೆ ಹಲವು ಕಥೆಗಳು ಲಭ್ಯವಾಗುತ್ತವೆ. ಇದರಿಂದ ಯಾವುದು ಫ್ರೆಂಡ್ಶಿಪ್ ಆಚರಣೆಯ ನಿಜವಾದ ಹಿನ್ನೆಲೆ ಎಂಬುದು ತಿಳಿಯುವುದು ಕಷ್ಟಸಾಧ್ಯವಾದರೂ ಈ ಆಚರಣೆ ಮಾತ್ರ ನಮ್ಮೆಲ್ಲರಿಗೂ ನಮ್ಮ ಸುಂದರ ಸ್ನೇಹವನ್ನು ಸಂಭ್ರಮಿಸಲು ಅನುವು ಮಾಡಿಕೊಟ್ಟ ಖುಷಿ ನೀಡುವುದು ಮಾತ್ರ ಸುಳ್ಳಲ್ಲ.
ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನ ಆಚರಿಸುವುದು ಏಕೆ?
ಭಾರತ, ಅಮೇರಿಕಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ದಿನದಂದು ಆಚರಿಸುವುದು ಒಂದು ಕಾರಣವು ಇದೆ. 1935ರಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೇರಿಕಾ ಸರ್ಕಾರವು ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತದೆ. ಈ ವ್ಯಕ್ತಿಯ ಸಾವಿನ ವಿಷಯ ತಿಳಿದ ಆತನ ಆತ್ಮೀಯ ಸ್ನೇಹಿತ ದುಃಖವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಇವರ ಈ ಸ್ನೇಹಬಂಧವನ್ನು ಕಂಡು ಅಮೇರಿಕಾ ಸರ್ಕಾರವು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲು ಘೋಷಣೆ ಮಾಡಿತು. ಕಾಲಕ್ರಮೇಣ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತಕ್ಕೆ ಬಂದ ಕಾರಣ, ಅಂದೇ ಭಾರತದಲ್ಲಿಯೂ ಅದೇ ದಿನದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ.
2024ರ ಫ್ರೆಂಡ್ಶಿಪ್ ಡೇ ಥೀಮ್
ಗಡಿಗಳನ್ನೂ ಮೀರಿ ಸ್ನೇಹ ಸಂಬಂಧ ಬೆಳೆಸುವುದು 2024ರ ಫ್ರೆಂಡ್ಶಿಪ್ ಡೇ ಥೀಮ್ ಆಗಿದೆ. ಅಂದರೆ ಸ್ನೇಹ ಎನ್ನುವುದು ದೇಶ, ಭಾಷೆಯ ಗಡಿಗಳನ್ನೂ ಮೀರಿಸುವಂಥದ್ದು ಎಂಬುದಾಗಿದೆ.
ಸ್ನೇಹಿತರ ದಿನದ ಮಹತ್ವ ಹಾಗೂ ಆಚರಣೆ
ಸ್ನೇಹ ಸಂಬಂಧಕ್ಕೆ ಯಾವುದೇ ಜಾತಿ, ಧರ್ಮವಿಲ್ಲ, ಪರಿಶುದ್ಧವಾದ ವ್ಯಕ್ತಿಗಳಿದ್ದರೆ ಸಾಕು. ಹೀಗಾಗಿ ಸ್ನೇಹ ಸಂಬಂಧದ ಮಹತ್ವವನ್ನು ತಿಳಿಸಲು ಹಾಗೂ ಸ್ನೇಹವನ್ನು ಗೌರವಿಸುವ ದಿನವಾಗಿದೆ. ಎಷ್ಟೋ ಸಲ ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸಲು ಸಾಧ್ಯವಾಗಿರುವುದಿಲ್ಲ. ಈ ದಿನದಂದು ತಮ್ಮ ಸ್ನೇಹಿತರಿಗೆ ವಿಶೇಷವಾದ ರೀತಿಯಲ್ಲಿ ಧನ್ಯವಾದಗಳನ್ನು ತಿಳಿಸಬಹುದಾಗಿದೆ. ಈ ದಿನದಂದು ಸ್ನೇಹಿತರು ಜೊತೆಯಾಗಿ ಪಾರ್ಟಿ ಅಥವಾ ಪ್ರವಾಸ ಹೋಗಬಹುದು. ಅಲ್ಲದೇ, ತಮ್ಮ ಆತ್ಮೀಯ ಸ್ನೇಹಿತರಿಗೆ ಪರಸ್ಪರ ಶುಭಾಶಯಗಳನ್ನು ತಿಳಿಸುವುದು. ಉಡುಗೊರೆ ನೀಡುವುದು ಸೇರಿದಂತೆ ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಆಚರಿಸಬಹುದು.
ಈ ಸಂದೇಶಗಳನ್ನು ಕಳುಹಿಸುವ ಮೂಲಕ ಸ್ನೇಹಿತರ ದಿನದ ಶುಭಾಶಯ ನಿಮ್ಮದಾಗಿರಲಿ.
*ನಿಮ್ಮೊಡನೆ ಕಳೆದ ಕಾಲೇಜು ದಿನಗಳನ್ನು ಮರೆಯಲೇ ಸಾಧ್ಯವಿಲ್ಲ. ನನ್ನ ಜತೆಗೆ ಅಷ್ಟು ವರ್ಷಗಳ ಕಾಲವಿದ್ದ ನಿಮಗೆ ಧನ್ಯವಾದಗಳು. ಎಂದಿಗೂ ನನ್ನ ಜತೆಗಿರಿ. ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
*ನಿಮ್ಮನ್ನು ಸ್ನೇಹಿತರಾಗಿ ಪಡೆದ ನಾನು ನಿಜವಾಗಿಯೂ ಅದೃಷ್ಟವಂತ. ನಿಮ್ಮನ್ನು ಭೇಟಿಯಾದ ಮೊದಲ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದ ನಿಮಗೆ ಸ್ನೇಹಿತರ ದಿನದ ಶುಭಾಶಯಗಳು.
*ಬಾಲ್ಯದಿಂದಲೂ ನನ್ನ ಜೊತೆಗೆದ್ದೀರಾ. ಅದೆಷ್ಟೋ ದಿನ ಸಂತೋಷದಿಂದ ಹೊಟ್ಟೆಹುಣ್ಣಾಗುವಷ್ಟು ನಕ್ಕಿದ್ದೇವೆ. ಹತ್ತಿರದ ಪ್ರವಾಸ ತಾಣಗಳಿಗೆ ಹೋಗಿ ದಿನ ಕಳೆದಿದ್ದೇವೆ. ನನ್ನ ಆ ಖುಷಿಗೆ ಕಾರಣರಾದ ನಿಮಗೆ ಸ್ನೇಹಿತರ ದಿನದ ಶುಭಾಶಯಗಳು. ನಮ್ಮ ಈ ಸ್ನೇಹ ಎಂದಿಗೂ ಶಾಶ್ವತವಾಗಿರಲಿ. ನಿಮಗೆಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಈ ದಿನದಂದು ನಿಮ್ಮೆಲ್ಲಾ ಸ್ನೇಹಿತರಿಗೆ ಶುಭಾಶಯ ತಿಳಿಸಿ. ಒಂದೊಳ್ಳೆಯ ಉಡುಗೊರೆಯನ್ನು ಕೊಟ್ಟು ಖುಷಿಯಿಂದ ಶುಭಾಶಯ ತಿಳಿಸಿ. ನಿಮ್ಮ ಆಪ್ತ ಸ್ನೇಹಿತರಿಗೆ ಸಿಹಿ ತಿನ್ನಿಸುವ ಮೂಲಕ ಈ ದಿನವನ್ನು ವಿಶೇಷವಾಗಿ ಸಂಭ್ರಮಿಸಿ. ಕಷ್ಟ ಕಾಲದಲ್ಲಿ ಕೈ ಹಿಡಿದು, ಮೆಟ್ಟಿಲೇರುವಾಗ ಹುರಿದುಂಬಿಸಿ, ಯಾವಾಗಲೂ ಸಂತೋಷವನ್ನೇ ಬಯಸುವ ಸ್ನೇಹಿತರಿಗೆ ಸ್ನೇಹಿತರ ದಿನದ ಶುಭಾಶಯಗಳು..