ಕೊಡಗು:- ಕಳೆದ ತಿಂಗಳುಗಳಿಂದ ಬರದ ಗೃಹಲಕ್ಷ್ಮಿ ಹಣ, ಹಾಗೂ ರಾಜ್ಯಪಾಲರ ಶೋಕಾಸ್ ನೋಟಿಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಗೃಹಲಕ್ಷ್ಮೀ ಯೋಜನೆ ಹಣ ವಿಚಾರವಾಗಿ ಮಾತನಾಡಿದ್ದು, ಮೇ ತಿಂಗಳವರೆಗೆ ಗೃಹಲಕ್ಷ್ಮೀ ಯೋಜನೆ ಹಣ ಕೊಟ್ಟಿದ್ದೇವೆ. ಜೂನ್, ಜುಲೈ ತಿಂಗಳ ಹಣ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಮುಂದುವರಿಸಲಿದೆ ಎಂದರು.
ಬಿಜೆಪಿ ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡುವಂತಿಲ್ಲವೆಂದು ಹೈಕೋರ್ಟ್ ಆದೇಶವಿದೆ. ಫ್ರೀಡಂನಲ್ಲಿ ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಶೇ.50ರಷ್ಟು ಮಳೆ ಹೆಚ್ಚಾಗಿದೆ. 20ಕ್ಕೂ ಹೆಚ್ಚು ಕಡೆ ಭೂಕುಸಿತವಾಗಿದೆ. ಅದೃಷ್ಟವಶಾತ್ ಪ್ರಾಣಹಾನಿಯಾಗಿಲ್ಲ, ಕೆಲವರಿಗೆ ಗಾಯಗಳಾಗಿವೆ. ಮಳೆ ನಿಂತ ತಕ್ಷಣ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ಕೊಡಲಾಗುವುದು ಎಂದಿದ್ದಾರೆ.
67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ. ಒಂದು ಲಕ್ಷದ 20 ಸಾವಿರ ರೂ. ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ. ಈಗಾಗಲೇ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದಾರೆ.
ಶೋಕಾಸ್ ನೋಟಿಸ್ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಬ್ರಹಾಂ ನೀಡಿರುವ ದೂರು ತಿರಸ್ಕರಿಸುವಂತೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.