ಬೆಂಗಳೂರು:-ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೈಟ್ ಹಂಚಿಕೆ ಬಗ್ಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿವರ ಕೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಈವರೆಗೆ ಸೈಟ್ ಹಂಚಿಕೆ ಬಗ್ಗೆ ರಾಜ್ಯಸಭಾ ಸದಸ್ಯರು, ಲೋಕಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿವರನ್ನು ಹೆಚ್ಡಿ ರೇವಣ್ಣ ಕೇಳಿದ್ದಾರೆ. ಆದರೆ ಸಂಪೂರ್ಣ ವಿವರ ನೀಡಲು ಕನಿಷ್ಟ 3 ತಿಂಗಳ ಕಾಲಾವಕಾಶ ಬೇಕೆಂದು ಮುಡಾ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯಪಾಲರು ಮುಡಾ ಹಗರಣದ ವರದಿ ಕೇಳಿದ್ದೇ ತಡ, ಕಾಂಗ್ರೆಸ್ ನಾಯಕರು ಶೇಕ್ ಆಗಿದ್ದರು. ದೆಹಲಿಯಿಂದ ಬರ್ತಿದ್ದಂತೆ ನಿನ್ನೆ ರಾತ್ರಿ ಸಚಿವ ಕೆ.ಜೆ ಜಾರ್ಜ್ ನಿವಾಸದಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದರು. ಬೆಳಗ್ಗೆ ಸಿಎಂ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸಭೆ ಮಾಡಲಾಗಿತ್ತು. ಸಭೆಯಲ್ಲಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿತ್ತು. ಸಚಿವರೆಲ್ಲರೂ ಸಿಎಂ ಬೆಂಬಲಕ್ಕೆ ನಿಲ್ಲೋದಾಗಿ ಅಭಯ ನೀಡಿದ್ದರು.
ತಮ್ಮ ವಿರುದ್ಧದ ಪ್ರಕರಣವೇ ಆಗಿದ್ದರಿಂದ ಸಂಪುಟ ಸಭೆಯಿಂದ ಅಂತರ ಕಾಯ್ದುಕೊಂಡ ಸಿಎಂ ಸಿದ್ದರಾಮಯ್ಯ ಸಭೆಯ ಅಥಾರಿಟಿಯನ್ನ ಡಿಕೆ ಶಿವಕುಮಾರ್ಗೆ ನೀಡಿದ್ದರು. ಹೀಗಾಗಿ ನಿನ್ನೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಡಾ ದಾಖಲೆಗಳನ್ನ ತರಿಸಿಕೊಂಡು ಯಾರ್ಯಾರಿಗೆ ಸೈಟು ಹಂಚಿಕೆಯಾಗಿದೆ ಎನ್ನುವ ಬಗ್ಗೆ ಚರ್ಚೆ ಮಾಡಲಾಗಿತ್ತು
ಕ್ಯಾಬಿನೆಟ್ ಸಭೆಯಲ್ಲೂ ಸಚಿವರು ಸಿಎಂಗೆ ಸಂಪೂರ್ಣ ಸಹಕಾರ ನೀಡಿದ್ದರು. ರಾಜ್ಯಪಾಲರ ನೋಟಿಸ್ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಪಾಲರು ಅಧಿಕಾರ ದುರುಪಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವರು, ರಾಜ್ಯಪಾಲರು ನೀಡಿರುವ ನೋಟಿಸ್ ಹಿಂಪಡೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.