ವಿಶ್ವದಲ್ಲೇ ಅತಿದೊಡ್ಡ ಆಟೋಮೊಬೈಲ್ ತಯಾರಕ ಕಂಪನಿ ಆಗಿರುವ ಜಪಾನ್ ಮೂಲದ ಟೊಯೊಟಾ ವಾರ್ಷಿಕ ಸುಮಾರು ಒಂದು ಕೋಟಿಗೂ ಅಧಿಕ ವಾಹನಗಳನ್ನ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯ ವಾಹನಗಳಿಗೆ ಸಾಕಷ್ಟು ಬೇಡಿಕೆ ಇದೆ. ಜಪಾನ್ನ ಐಚಿಯಲ್ಲಿರುವ ಟೊಯೊಟಾ ಸಿಟಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಟೊಯೊಟಾ ಕಂಪನೆ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ವ್ಯಾಪಿಸಿಕೊಂಡಿದೆ.
ಟಾಯೋಟಾ ತನ್ನ ಗಾಡಿಗಳಿಗೆ ಹೊಸ ಹೊಸ ಟಚ್ ನೀಡಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆ ಮೂಲಕಗ್ರಾಹಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಪ್ರತಿಷ್ಠಿತ ಕಂಪನಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯಲ್ಲಿ ತಯಾರಿಕಾ ಘಟಕವನ್ನ ಹೊಂದಿದೆ. ಆದರೆ ಇತ್ತೀಚೆಗೆ ಒಂದು ಸುದ್ದಿಯಾಗಿತ್ತು. ಟೊಯೊಟಾ ಕರ್ನಾಟಕವನ್ನ ತೊರೆಯಲಿದೆ. ಇಲ್ಲಿನ ತಯಾರಿಕಾ ಘಟಕವನ್ನ ಮುಚ್ಚಿ, ಮಹಾರಾಷ್ಟ್ರದಲ್ಲಿ ತೆರೆಯಲು ನಿರ್ಧಾರ ಮಾಡಿದೆ ಎಂದು ಹೇಳಲಾಗಿತ್ತು. ಅಂದಹಾಗೇ, ಟೊಯೊಟಾ ಕಿರ್ಲೋಸ್ಕ್ ಕಂಪನಿಯು ಮಹಾರಾಷ್ಟ್ರದಲ್ಲಿ ಕಾರು ತಯಾರಿಕಾ ಘಟಕ ತೆರೆಯಲು ಅಲ್ಲಿನ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಟೊಯೊಟಾ ಕಂಪನಿ ಕರ್ನಾಟಕ ತೊರೆಯಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಜಪಾನ್ ಪ್ರವಾಸ ಮಾಡಿ, ಅಲ್ಲಿನ ವಿವಿಧ ಕಂಪನಿಗಳೊಂದಿಗೆ ಹೂಡಿಕೆ ವಿಚಾರವಾಗಿ ಚರ್ಚೆ ಮಾಡಿ ವಾಪಸ್ ಆಗಿದ್ದಾರೆ.
ಟೊಯೊಟಾ ಕಂಪನಿ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಚಿವ ಎಂ.ಬಿ.ಪಾಟೀಲ್, 30 ವರ್ಷಗಳಿಂದಲೂ ಟೊಯೊಟಾ ಕಂಪನಿಯು ಇಲ್ಲಿಯೇ ನೆಲೆಯೂರಿದೆ. ಅದರ ಹೂಡಿಕೆ ಎಂದಿನಂತೆ ಮುಂದುವರಿಯಲಿದೆ. ಟೊಯೊಟಾ ಕಂಪನಿ ಮಹಾರಾಷ್ಟ್ರದಲ್ಲಿ ಹೂಡಿಕೆ ಮಾಡುತ್ತಿರುವುದನ್ನ ಬೇರೆ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಇಲ್ಲಿಂದ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದಾರೆ.
‘ಟೊಯೊಟಾ ಕಂಪನಿಯು ಮಹಾರಾಷ್ಟ್ರದಲ್ಲಿ ಹೆಚ್ಚುವರಿ ಹೂಡಿಕೆ ಮಾಡಬಹುದು. ನಮ್ಮಲ್ಲಿ ಹೂಡಿಕೆ ಮಾಡಿದ ಮಾತ್ರಕ್ಕೆ ಅವರು ಇನ್ನೊಂದು ಕಡೆ ಬಂಡವಾಳ ಹೂಡಬಾರದು ಎಂದೇನಿಲ್ಲ. ಆದರೆ ರಾಜ್ಯದಲ್ಲಿ ಆ ಕಂಪನಿಯ ಹೂಡಿಕೆ ಎಂದಿನಂತೆಯೇ ಮುಂದುವರಿಯಲಿದೆ. ಈ ಕಂಪನಿಯು 2023ರಲ್ಲಿ ಬಿಡದಿಯಲ್ಲಿ ತನ್ನ 3ನೇ ಕಾರು ತಯಾರಿಕಾ ಘಟಕ ತೆರೆಯಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 3, 300 ಕೋಟಿ ರೂಪಾಯಿ ವೆಚ್ಚದ ಒಪ್ಪಂದ ಇದು. 2022ರಲ್ಲಿ 4,100 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಅದರ ಕೇಂದ್ರ ಕಚೇರಿ ಮತ್ತು ಸಂಶೋಧನಾ ಕೇಂದ್ರಗಳು ನಮ್ಮಲ್ಲೇ ಇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಯಾವುದೇ ಕಂಪನಿಗಳು ತಮ್ಮ ಉದ್ಯಮಗಳು, ಚಟುವಟಿಕೆಗಳನ್ನ ವಿಸ್ತರಿಸಿಕೊಳ್ಳುವುದು ಸಹಜ. ಟೊಯೋಟಾ ಕೂಡ ಅದೇ ರೀತಿಯಲ್ಲಿ ನೆರೆ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದೆ. ಆದರೆ ಇದರಿಂದ ಕರ್ನಾಟಕ್ಕೆ ನಷ್ಟವೇನೂ ಆಗುತ್ತಿಲ್ಲ ಎಂದೂ ಸಚಿವರು ಹೇಳಿದ್ದಾರೆ.