ನವದೆಹಲಿ: ಮೂಡಾ ಮತ್ತು ವಾಲ್ಮೀಕಿ ಹಗರಣ ವಿರುದ್ಧವಾಗಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಕುರಿತಂತೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದರು. ಇನ್ನೂ ಹಾಸನ ಬಿಜೆಪಿ ಮುಖಂಡ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಮೈಸೂರಿನ ವರೆಗೆ ನಮ್ಮ ಪ್ರಾಬಲ್ಯ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಿಗೆ ಇರುವುದು ಬೇರೆ ರಾಜಕಾರಣ ಬೇರೆ. ಬಿಜೆಪಿ ನಡೆದುಕೊಂಡಿರುವ ರೀತಿ ಮನಸಿಗೆ ಬೇಸರ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು. ಇವರು ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಿಕೊಂಡಿದ್ದಾರೆ? ಯಾರು ಆ ಪ್ರೀತಂ ಗೌಡ? ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ, ಸರ್ವನಾಶ ಮಾಡಲು ಹೊರಟ ಪ್ರೀತಂ ಗೌಡರನ್ನು ಕರೆಸಿ ಸಭೆ ಮಾಡುತ್ತಾರೆ.
ಅಂಥವರನ್ನು ನನ್ನ ಪಕ್ಕದಲ್ಲಿ ಕೂರಿಸಿ ಸಭೆ ಮಾಡುತ್ತಾರೆ. ಯಾರು ಹಾಸನದಲ್ಲಿ ಆ ಪೆನ್ಡ್ರೈವ್ ಹಂಚಿದವರು? ಅಂಥವರನ್ನು ನನ್ನ ಜತೆ ಕೂರಿಸಿ ಸಭೆ ಮಾಡುತ್ತಾರೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜತೆ ಕುಳಿತುಕೊಳ್ಳಿಸಿ ನಮ್ಮ ಬೆಂಬಲ ಕೇಳುತ್ತಾರಾ? ಗೊತ್ತಿಲ್ಲವೇ ಅವರಿಗೆ ಹಾಸನದಲ್ಲಿ ಏನೇನಾಗಿದೆ ಎಂಬುದಾಗಿ ಎಂದು ಕುಮಾರಸ್ವಾಮಿ ಆಕ್ರೋಶದಿಂದ ಹೇಳಿದರು.