ಆನೇಕಲ್:- ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ ಗುಂಡಿನ ಸದ್ದು ಕೇಳಿದೆ. ಪುರಸಭೆ ಸದಸ್ಯನ ಕೊಲೆ ಮಾಡಿದ್ದ ರೌಡಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಬಂಧಿತ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಮೈಸೂರಮ್ಮನ ದೊಡ್ಡಿ ಬಳಿ ಫೈರಿಂಗ್ ನಡೆದಿದೆ. ಆನೇಕಲ್ ಭಾಗದ ಕುಖ್ಯಾತ ರೌಡಿ ಶೀಟರ್ ಆಗಿರುವ ಜೆಕೆ, ಮೈಸೂರಮ್ಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಸೆರೆಯಾಗುವಂತೆ ಆದೇಶಿಸಿ ಆನೇಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಜೆಕೆ ಪೊಲೀಸ್ ಸಿಬ್ಬಂದಿ ಸುರೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.
ಈತ ಪುರಸಭಾ ಸದಸ್ಯ ಸ್ಕ್ರಾಪ್ ರವಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಕಳೆದ 24ನೇ ತಾರೀಕು ಬುಧವಾರ ಕೊಲೆ ನಡೆದಿತ್ತು. ಸ್ಕ್ರಾಪ್ ರವಿ ಕಚೇರಿಯಲ್ಲಿದ್ದಾಗ ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಗ್ಯಾಂಗ್ ಕಚೇರಿಗೆ ನುಗ್ಗಿ ಕೊಲೆ ಮಾಡಿತ್ತು. ಕಾರ್ತಿಕ್ ಅಲಿಯಾಸ್ ಜೆಕೆ, ಹರೀಶ್ ಅಲಿಯಾಸ್ ಹಂದಿ ಹರೀಶ್, ವಿನಯ್ ಅಲಿಯಾಸ್ ವಿನಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.
ಆರೋಪಿಗಳ ಬಂಧನಕ್ಕೆ ಪೊಲೀಸರ ಎರಡು ತಂಡ ರಚಿಸಲಾಗಿತ್ತು. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕೊಲೆ ಆರೋಪಿಗಳ ಪೈಕಿ ಹರೀಶ್ ಮತ್ತು ವಿನಯ್ ಕೋರ್ಟಿಗೆ ಶರಣಾಗಿದ್ದಾರೆ.