ಪ್ಯಾರಿಸ್: ಕ್ರೀಡಾ ಗ್ರಾಮದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬ್ರೆಜಿಲ್ನ ಈಜುಗಾರ್ತಿಯನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಹಾಕಿರುವ ಘಟನೆ ನಡೆದಿದೆ.
ಅನಾ ಕೆರೊಲಿನಾ ವಿಯೆರಾ ತನ್ನ ಗೆಳೆಯ ಮತ್ತು ಸಹ ಆಟಗಾರ ಗೇಬ್ರಿಯಲ್ ಸ್ಯಾಂಟೋಸ್ ಜೊತೆ ರಾತ್ರಿ ಕಳೆಯಲು ಕ್ರೀಡಾ ಗ್ರಾಮವನ್ನು ತೊರೆದಿದ್ದರು. ಅನುಮತಿ ಇಲ್ಲದೆ ಹೊರ ಹೋಗಿದ್ದಕ್ಕಾಗಿ ಇಂತಾ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜುಲೈ 27ರ ಶನಿವಾರ ಬ್ರೆಜಿಲ್ ತಂಡದೊಂದಿಗೆ 4×100 ಮೀಟರ್ಸ್ ಫ್ರೀಸ್ಟೈಲ್ ರಿಲೇಯಲ್ಲಿ ಸ್ಪರ್ಧಿಸಿದ್ದ 22 ವರ್ಷದ ಅನಾ ಕೆರೊಲಿನಾ ವಿಯೆರಾ ನವರು ಜುಲೈ 26ರ ಶುಕ್ರವಾರ ರಾತ್ರಿ ಅನುಮತಿಯಿಲ್ಲದೆ ಗ್ರಾಮವನ್ನು ತೊರೆದಿದ್ದರು. ಭಾನುವಾರ, ಬ್ರೆಜಿಲಿಯನ್ ಒಲಿಂಪಿಕ್ ಕಮಿಟಿಗೆ (COB) ಗೇಬ್ರಿಯಲ್ ಸ್ಯಾಂಟೋಸ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ವಿಯೆರಾ ಆತನ ಜೊತೆ ಹೊರಗೆ ಹೋಗಿರುವುದು ತಿಳಿಯಿತು. ಇದಾದ ಬಳಿಕ ಆಕೆಯನ್ನು ಒಲಿಂಪಿಕ್ಸ್ನಿಂದ ಹೊರಹಾಕುವ ನಿರ್ಧಾರ ಮಾಡಿದೆ.
ಬ್ರೆಜಿಲ್ನ ಈಜು ತಂಡದ ಮುಖ್ಯಸ್ಥ ಗುಸ್ಟಾವೊ ಒಟ್ಸುಕಾ ಅವರು, ‘ಅನುಚಿತ’ ನಡವಳಿಕೆಯ ಬಗ್ಗೆ COBಗೆ ಮಾಹಿತಿ ನೀಡಿದರು. ಸ್ಯಾಂಟೋಸ್ ಸಹ ನಿಯಮವನ್ನು ಉಲ್ಲಂಘಿಸಿದ್ದರೂ, ಕ್ಷಮೆಯಾಚಿಸಿದ ನಂತರ ಎಚ್ಚರಿಕೆ ನೀಡಿ ಅವರನ್ನು ಕೈ ಬಿಡಲಾಯಿತು ಎಂದು ತಿಳಿಸಿದ್ದಾರೆ.