2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬೈಡನ್ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ಬಳಿಕ ಆ ಸ್ಥಾನಕ್ಕೆ ಉಪಾಧ್ಯಕ್ಷೇ ಕಮಲಾ ಹ್ಯಾರಿಸ್ ಹೆಸರು ಕೇಳಿ ಬಂದಿದೆ. ಇದೀಗ ಡೆಮಕ್ರಾಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಪ್ರಚಾರಕ್ಕೆ 3.6 ಲಕ್ಷ ಜನರು ಸ್ವಪ್ರೇರಿತರಾಗಿ ಮುಂದೆ ಬಂದಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಲ್ಲಿ ಕಮಲಾ ಪರವಾಗಿ ತಳಮಟ್ಟದಲ್ಲಿ ಬೆಂಬಲ ಬಲಗೊಳ್ಳುತ್ತಿದೆ ಎಂಬುದನ್ನು ಇದು ಸಾಭೀತು ಪಡಿಸಿದೆ.
ಅಧ್ಯಕ್ಷ ಜೋ ಬೈಡನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಆದರೆ ಹ್ಯಾರಿಸ್ ಅವರನ್ನು ಪಕ್ಷ ಇನ್ನೂ ಅಧಿಕೃತವಾಗಿ ಅಭ್ಯರ್ಥಿತನವನ್ನು ಘೋಷಿಸಬೇಕಿದೆ.
‘ಕಮಲಾ ಹ್ಯಾರಿಸ್ ಪರ ಮೊದಲ ವಾರದಲ್ಲಿ 200 ಮಿಲಿಯನ್ ಡಾಲರ್ ನಿಧಿ ಸಂಗ್ರಹವಾಗಿದ್ದು, 17 ಸಾವಿರ ಕಾರ್ಯಕರ್ತರು ಸ್ವಪ್ರೇರಣೆಯಿಂದ ಪ್ರಚಾರಕ್ಕೆ ಮುಂದಾಗಿದ್ದರು. ಈಗ ಕಾರ್ಯಕರ್ತರ ಸಂಖ್ಯೆ 3.6 ಲಕ್ಷಕ್ಕೆ ಏರಿದೆ’ ಎಂದು ಪ್ರಚಾರ ಕಾರ್ಯದ ಮುಂಚೂಣಿಯಲ್ಲಿರುವ ಡ್ಯಾನ್ ಕನ್ನಿನೆನ್ ಹೇಳಿದರು.
‘ಹ್ಯಾರಿಸ್ ಫಾರ್ ಪ್ರೆಸಿಡೆಂಟ್’ ಅಭಿಯಾನ ಬರುವ ದಿನಗಳಲ್ಲಿ ಇನ್ನಷ್ಟು ಚುರುಕು ಪಡೆಯಲಿದೆ. ಗೆಲುವಿಗೆ ಅಗತ್ಯವಿರುವ 270 ಚುನಾವಣಾ ಮತ ಪಡೆಯಲು ಅಮೆರಿಕದ ಬ್ಲೂವಾಲ್ ಮತ್ತು ಸನ್ ಬೆಲ್ಟ್ ಎರಡೂ ವಲಯದಲ್ಲಿ ಪ್ರಚಾರವನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.
‘ಚುನಾವಣಾ ಓಟದಲ್ಲಿ ನಾವು ಆರಂಭಿಕ ಹಂತದಲ್ಲಿದ್ದೇವೆ. ಆದರೆ, ಇದು ಜನರೇ ಮುನ್ನಡೆಸುತ್ತಿರುವ ಅಭಿಯಾನವಾಗಿದೆ. ಈ ಅಭಿಯಾನವು ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ’ ಎಂದು ವಾರದ ಹಿಂದೆ ಕಮಲಾ ಹೇಳಿದ್ದರು.
‘ಹೊಸ ಪೀಳಿಗೆಗೆ ಸಾರಥ್ಯ ವಹಿಸಲು ಉತ್ತಮ ಮಾರ್ಗ ಗುರುತಿಸಿದ್ದೇನೆ. ಇದು ದೇಶ ಒಗ್ಗೂಡಿಸುವ ಮಾರ್ಗವೂ ಹೌದು. ಸ್ಫೂರ್ತಿದಾಯಕ ನಾಯಕಿಯಾಗಿಯೇ ಕಮಲಾ ಮುಂದುವರಿಯುವರು’ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಆಸ್ಟಿನ್ನ ಲಿಂಡನ್ ಬಿ ಜಾನ್ಸನ್ ಪ್ರೆಸಿಡೆಂಟ್ ಗ್ರಂಥಾಲಯದಲ್ಲಿ ಮಾತನಾಡಿದ ಅವರು ‘ಕಮಲಾ ಅವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ರಾಜಕೀಯ ಬದುಕಿನುದ್ದಕ್ಕೂ ನಾಗರಿಕ ಹಕ್ಕುಗಳಿಗೆ ಹೋರಾಡಿದ್ದಾರೆ. ಅದಕ್ಕಾಗಿ ಪ್ರೇರಣೆ ಆಗಿದ್ದಾರೆ’ ಎಂದು ಬೈಡನ್ ಶ್ಲಾಘಿಸಿದ್ದಾರೆ.