ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನಿಂಗ್ಸ್ ಮತ್ತು 114 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 241 ರನ್ಗಳ ಗೆಲುವು ದಾಖಲಿಸಿತ್ತು. ಹಾಗೆಯೇ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
‘ಬ್ಯಾಝ್ ಬಾಲ್ ಕ್ರಿಕೆಟ್’ ಮೂಲಕ ಕೇವಲ 7.2 ಓವರ್ಗಳಲ್ಲೇ ಗುರಿ ಮೆಟ್ಟಿನಿಂತು ವಿಜಯೋತ್ಸವ ಆಚರಿಸಿತು. ಇದರೊಂದಿಗೆ 2000 ಇಸವಿಯ ಬಳಿಕ ವೆಸ್ಟ್ ಇಂಡೀಸ್ ಎದುರು ತವರಿನಲ್ಲಿ ಆಡಿದ ಎಲ್ಲ ಟೆಸ್ಟ್ ಸರಣಿಗಳನ್ನು ಇಂಗ್ಲೆಂಡ್ ಗೆದ್ದಿದ್ದು, ಅಜೇಯ ಓಟದ ದಾಖಲೆ ಉಳಿಸಿಕೊಂಡಿದೆ.
ಈ ಗೆಲುವುಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ 2ನೇ ನಾಯಕ ಎಂಬ ಹೆಗ್ಗಳಿಕೆಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು ಎಂಬುದು ವಿಶೇಷ.
ಆದರೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ಬೆನ್ ಸ್ಟೋಕ್ಸ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಈವರೆಗೆ 24 ಪಂದ್ಯಗಳನ್ನಾಡಿದೆ. ಈ ವೇಳೆ ಇಂಗ್ಲೆಂಡ್ ತಂಡವು 15 ಗೆಲುವು ಸಾಧಿಸಿದೆ. ಹಾಗೆಯೇ 8 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ 15 ಗೆಲುವುಗಳೊಂದಿಗೆ ಬೆನ್ ಸ್ಟೋಕ್ಸ್ ಇದೀಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.