ಭಾರತ ಹಾಗೂ ಶ್ರೀಲಂಕಾ ನಡುವಿನ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸುವುದರೊಂದಿಗೆ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಡೀ ಪಂದ್ಯದುದ್ದಕ್ಕೂ ಗೆಲುವಿಗಾಗಿ ಹೋರಾಡಿದ ಶ್ರೀಲಂಕಾ ತಂಡ, ಭಾರತ ಮತ್ತು ಬಾಂಗ್ಲಾದೇಶದ ನಂತರ ಏಷ್ಯಾಕಪ್ ಗೆದ್ದ ಮೂರನೇ ಮಹಿಳಾ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಲಂಕಾ 19ನೇ ಓವರ್ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.
ಆದರೂ ಸ್ಮೃತಿ ಮಂಧಾನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ, 47 ಎಸೆತಗಳಲ್ಲಿ 60 ರನ್ಗಳ ಕಾಣಿಕೆ ನೀಡಿದರು. ಅವರ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿಗಳು ಸೇರಿದ್ದವು. ಕೊನೆಯಲ್ಲಿ ರಿಚಾ ಘೋಷ್ ಕೂಡ ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 30 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ಜೆಮಿಮಾ ರೋಡ್ರಿಗಸ್ 16 ಎಸೆತಗಳಲ್ಲಿ 29 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.
166 ರನ್ಗಳಿಗೆ ಉತ್ತರವಾಗಿ ಶ್ರೀಲಂಕಾ ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 7 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಇದಾದ ನಂತರ ಎರಡನೇ ವಿಕೆಟ್ಗೆ ಅರ್ಧಶತಕಕ್ಕೂ ಹೆಚ್ಚಿನ ಜೊತೆಯಾಟ ಬಂತು. ಶ್ರೀಲಂಕಾ ಪರ ನಾಯಕಿ ಚಾಮರಿ ಅಟಪಟ್ಟು 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಾಯದಿಂದ 61 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಇವರಲ್ಲದೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಷಿತಾ ಕೂಡ 51 ಎಸೆತಗಳಲ್ಲಿ 69 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು