ಒಲಿಂಪಿಕ್ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮುನ್ನ ಪ್ಯಾರಿಸ್ನ ವಿವಿಧೆಡೆ ರೈಲು ಸಂಪರ್ಕ ಜಾಲದ ಮೇಲೆ ಸಂಘಟಿತ ದಾಳಿ ನಡೆದಿದ್ದು, ಫ್ರಾನ್ಸ್ನಾದ್ಯಂತ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
ಪ್ಯಾರಿಸ್ನ ಉತ್ತರ, ನೈರುತ್ಯ ಮತ್ತು ಪೂರ್ವ ಭಾಗಗಳಲ್ಲಿನ ಪ್ರಮುಖ ಜಂಕ್ಷನ್ಗಳನ್ನು ಗುರಿಯಾಗಿಸಿ ಗುರುವಾರ ರಾತ್ರಿ ಸಿಗ್ನಲ್ ಮೂಲಸೌಕರ್ಯ, ಕೇಬಲ್ಗಳು ಸೇರಿದಂತೆ ರೈಲ್ವೆಗೆ ಸೇರಿದ ಸ್ವತ್ತುಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಣಾಮ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಫ್ರಾನ್ಸ್ನಲ್ಲಿ ರೈಲ್ವೆ ಸಂಪರ್ಕವನ್ನು ನಿರ್ವಹಿಸುತ್ತಿರುವ ಎಸ್ಎನ್ಸಿಎಫ್ ತಿಳಿಸಿದೆ.
ರಾಜಧಾನಿಯ ಆಗ್ನೇಯ ಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ ಇಂತಹದೇ ದಾಳಿಯ ಪ್ರಯತ್ನ ನಡೆದಿದ್ದು, ರೈಲ್ವೆ ಸಿಬ್ಬಂದಿ ಅದನ್ನು ವಿಫಲಗೊಳಿಸಿದ್ದಾರೆ.
ಪ್ಯಾರಿಸ್ನಿಂದ ದೇಶದ ಇತರ ನಗರಗಳಿಗೆ ಹಾಗೂ ನೆರೆಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಹಲವಾರು ಹೈಸ್ಪೀಡ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಫ್ರಾನ್ಸ್ನ ಸಾರಿಗೆ ಸಚಿವ ಪ್ಯಾಟ್ರೀಸ್ ವೇಗ್ರಿಯೇಟ್ ಹೇಳಿದ್ದಾರೆ.
ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಅವರು ಈ ದಾಳಿಯನ್ನು ‘ಪೂರ್ವಯೋಜಿತ ಮತ್ತು ಸಂಘಟಿತವಾಗಿ ನಡೆದ ವಿಧ್ವಂಸಕ ಕೃತ್ಯ’ ಎಂದು ಕರೆದಿದ್ದಾರೆ. ‘ಈ ಕೃತ್ಯದ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷಿಸಲು ನಮ್ಮ ಗುಪ್ತಚರ ದಳದ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ಯಾರಿಸ್- ಲಂಡನ್ ನಡುವಣ ‘ಯೂರೊಸ್ಟಾರ್’ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದರಿಂದ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲು ಪ್ಯಾರಿಸ್ಗೆ ಪ್ರಯಾಣಿಸಲು ಬಯಸಿದ್ದ ಬ್ರಿಟನ್ನ ಹಲವು ಕ್ರೀಡಾಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ.
ಎಲ್ಲ ಮಾರ್ಗಗಳಲ್ಲಿ ರೈಲುಗಳ ಸಂಚಾರ ಯಥಾಸ್ಥಿತಿಗೆ ಬರಲು ಇನ್ನೂ ಕೆಲವು ಸಮಯ ಬೇಕಾಗಬಹುದು. ಆದ್ದರಿಂದ ಈ ವಾರಾಂತ್ಯದವರೆಗೆ ಸುಮಾರು ಎಂಟು ಲಕ್ಷ ಪ್ರಯಾಣಿಕರು ತೊಂದರೆ ಅನುಭವಿಸಬಹುದು ಎಂದು ಮೂಲಗಳು ಹೇಳಿವೆ.