ಗಂಡ ದೌರ್ಜನ್ಯಕ್ಕೆ ಬೇಸತ್ತಿದ್ದ ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡ ಅಪ್ಪ ಮಗಳ ಕಾಲು ಕತ್ತರಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಪಿತೃಪ್ರಧಾನ ಸಮಾಜಗಳಲ್ಲಿ, ಮಹಿಳೆಯರ ಅಧೀನತೆಯನ್ನು ಶಾಶ್ವತಗೊಳಿಸಲು ಹಿಂಸೆಯನ್ನು ಸಾಮಾಜಿಕ ಕಾರ್ಯವಿಧಾನವಾಗಿ ಬಳಸಲಾಗಿದೆ ಎಂದು ಹೇಳಲಾಗಿದೆ. ಸೋಬಿಯಾ ಬಟೂಲ್ ಶಾ ಎಂಬ ಮಹಿಳೆ ಗಂಡನಿಂದ ವಿಚ್ಛೇದನ ಕೋರಿದ್ದಳು. ಆತ ಯಾವತ್ತೂ ಕುಟುಂಬದ ಜವಾಬ್ದಾರಿ ತೆಗೆದುಕೊಂಡಿಲ್ಲ, ಆತ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ, ನಿಂದಿಸುತ್ತಿದ್ದ. ಈ ದೌರ್ಜನ್ಯದಿಂದ ಬೇಸತ್ತು ವಿಚ್ಛೇದನ ಕೋರಿದ್ದಕ್ಕಾಗಿ ನನ್ನ ಕಾಲುಗಳನ್ನು ಕತ್ತರಿಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಗುಲ್ ಟೌನ್ನಲ್ಲಿ ಆ ಕೃತ್ಯ ನಡೆದಿದೆ. ಮಹಿಳೆಗೆ ಇದು ತೀವ್ರವಾದ ದೈಹಿಕ ಮತ್ತು ಮಾನಸಿಕ ಆಘಾತವನ್ನು ಉಂಟು ಮಾಡಿದ್ದು, ಆಕೆ ಮತ್ತೆಂದೂ ನಡೆಯಲು ಸಾಧ್ಯವಾಗದ ಹಾಗೆ ಅಂಗ ವೈಕಲ್ಯವುಂಟಾಗಿದೆ ಎಂದು ವರದಿ ತಿಳಿಸಿದೆ.
ಸೋಬಿಯಾಳ ತಂದೆ ಸೈಯದ್ ಮುಸ್ತಫಾ ಷಾ ಮತ್ತು ಆಕೆಯ ಚಿಕ್ಕಪ್ಪಂದಿರಾದ ಸೈಯದ್ ಕುರ್ಬಾನ್ ಷಾ, ಎಹ್ಸಾನ್ ಶಾ, ಶಾ ನವಾಜ್ ಮತ್ತು ಮುಷ್ತಾಕ್ ಷಾ ಎಂಬವರು ಕೊಡಲಿಯಿಂದ ಕಾಲು ಕತ್ತರಿಸಿ ಓಡಿ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಆಕೆ ಸಹಾಯಕ್ಕಾಗಿ ಬೇಡುತ್ತಿದ್ದರು ಎಂದು ಜಿಯೋ ನ್ಯೂಸ್ ವರದಿ ಹೇಳಿದೆ. ಪೊಲೀಸರು ಅಪರಾಧ ಸ್ಥಳಕ್ಕೆ ತಲುಪಿದ ತಕ್ಷಣ ಸೋಬಿಯಾ ಅವರನ್ನು ನವಾಬ್ ಶಾ ಆಸ್ಪತ್ರೆಗೆ ಸಾಗಿಸಲಾಯಿತು.
ತನ್ನ ಪತಿ ತನ್ನನ್ನು ನಿಂದಿಸುತ್ತಾನೆ. ಇಬ್ಬರು ಮಕ್ಕಳನ್ನು ಕೂಡಾ ನೋಡುವ ಜವಾಬ್ದಾರಿ ಆತನಿಗಿಲ್ಲ. ಕರಾಚಿಯಲ್ಲಿ ನಾನು ಒಬ್ಬಳೇ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ. ನಾನು ಪಡುತ್ತಿರುವ ಕಷ್ಟ, ಅನುಭವಿಸುತ್ತಿರುವ ದೌರ್ಜನ್ಯ ಬಗ್ಗೆ ಪೋಷಕರಲ್ಲಿ ಹೇಳುತ್ತಲೇ ಇದ್ದೆ. ಅವರು ಇದಕ್ಕೆ ಕಿವಿಗೊಡಲೇ ಇಲ್ಲ. ಹೀಗೆಲ್ಲ ಗಂಡನ ಬಗ್ಗೆ ದೂರುವುದು ಅವಮಾನ ಎಂದು ಕುಟುಂಬ ಆಕೆಯ ಮಾತನ್ನು ತಳ್ಳಿತ್ತು ಎಂದು ಮಹಿಳೆ ಹೇಳಿರುವುದಾಗಿ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ದೌರ್ಜನ್ಯದಿಂದ ಕೂಡಿದ ವೈವಾಹಿಕ ಸಂಬಂಧದಿಂದ ಹೊರಬರಲು ನಿರ್ಧರಿಸಿದ ನಂತರ, ಸೋಬಿಯಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ಆಕೆಯ ತಂದೆ ಮತ್ತು ಚಿಕ್ಕಪ್ಪನನ್ನು ಕೆರಳಿಸಿತ್ತು.
ಸೋಬಿಯಾ ಬಗ್ಗೆ ಕೋಪಗೊಂಡ ಪೋಷಕರು ಆಕೆ ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಸಿಟ್ಟುಗೊಂಡಿದ್ದರು ಎಂದಿದ್ದಾರೆ ಪೊಲೀಸರು. ಆಕೆ ತನ್ನ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದಾಗ, ಅವರು ಆಕೆಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.