ಎಲ್ಲ ಸಮಯದಲ್ಲೂ ಚಹಾ ಕಾಫಿ ಸೇವನೆ ಒಳ್ಳೆಯದಲ್ಲ. ಕೆಲವು ಸಮಯಗಳಲ್ಲಿ ಇವುಗಳ ಸೇವನೆ ಮಾಡುವುದರಿಂದ ನಾವು ಸೇವಿಸುವ ಆಹಾರಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರದೆ ನಷ್ವಾಗಬಹುದು. ಇನ್ನೂ ಕೆಲವೊಮ್ಮೆ ಇವು ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಅಷ್ಟೇ ಅಲ್ಲ, ನಮ್ಮ ದೇಹದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಈ ನಮ್ಮ ಕೆಟ್ಟ ಅಭ್ಯಾಸದಿಂದಲೂ ಇರಬಹುದು. ಬನ್ನಿ, ಚಹಾ ಹಾಗೂ ಕಾಫಿಯನ್ನು ನಾವು ಯಾವ ಸಮಯದಲ್ಲಿ ಕುಡಿಯಬಾರದು ಎಂಬುದನ್ನು ನೋಡೋಣ.
ಬಹುತೇಕ ಎಲ್ಲರಿಗೂ ಇರುವ ಅಭ್ಯಾಸವಿದು. ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಕೈಯಲ್ಲಿದ್ದರೇ ದಿನ ಆರಂಭವಾದ ಹಾಗೆ. ಈ ಅಭ್ಯಾಸ ಅನೇಕರಿಗಿದೆ. ಇದನ್ನು ಬಿಡುವುದು ಕಷ್ಟ ನಿಜವೇ. ಆದರೆ, ಬೆಳಗ್ಗೆ ಎದ್ದ ಕೂಡಲೇ ಚಹಾ ಅಥವಾ ಕಾಫಿಯನ್ನು ಹೊಟ್ಟೆಗಿಳಿಸುವುದರಿಂದ ಇದರಲ್ಲಿರುವ ಕೆಫೀನ್ ಅಂಶವು ಖಾಲಿ ಹೊಟ್ಟೆಯ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಹಾರ್ಮೋನ್ ಉತ್ಪಾದನೆಯ ವ್ಯವಸ್ಥೆಯನ್ನೂ ಇದೂ ಹದಗೆಡಿಸುವುದಲ್ಲದೆ, ಇದರಿಂದ ಮಾನಸಿಕವಾಗಿಯೂ ಒತ್ತಡ ಇತ್ಯಾದಿ ಸಮಸ್ಯೆಗಳು ಬರಬಹುದು
ನಿಮಗೆ ಊಟ ತಿಂಡಿಯ ಜೊತೆಗೆ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ ಮತ್ತೊಮ್ಮೆ ಯೋಚಿಸಿ. ಚಹಾ ಮತ್ತು ಕಾಫಿ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನೇ ಹಾಳುಗೆಡವಬಹುದು. ನೀವು ಪ್ರೊಟೀನ್ಯುಕ್ತ ಆಹಾರ ತೆಗೆದುಕೊಂಡರೆ, ಅದರ ಜೊತೆಗೆ ಚಹಾ/ಕಾಫಿಯನ್ನೂ ಸೇವಿಸಿದರೆ ಪ್ರೊಟೀನ್ ನಿಮ್ಮ ದೇಹದಕ್ಕೆ ಒದಗದು. ಅಷ್ಟೇ ಅಲ್ಲ, ಪ್ರೊಟೀನ್ ಕರಗಲು ಕಷ್ಟವಾಗುತ್ತದೆ. ನಿಮ್ಮ ಆಹಾರದಲ್ಲಿರುವ ಕಬ್ಬಿಣದಂಶವೂ ಕೂಡಾ ದೇಹಕ್ಕೆ ಸೇರಲು ಕಷ್ಟವಾಗಬಹುದು. ಹಾಗಾಗಿ, ಆಹಾರದ ಜೊತೆಗೆ ಚಹಾ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಆಹಾರದಲ್ಲಿರುವ ಪೋಷಕಾಂಶಗಳು ಕರಗಿ ನಿಮ್ಮ ದೇಹಕ್ಕೆ ಸೇರುವ ಕ್ರಿಯೆ ನಿಧಾನವಾಗುತ್ತದೆ. ಹಾಗೆಯೇ ಪೋಷಕಾಂಶಗಳು ನಷ್ಟವಾಗಲೂಬಹುದು
ಸಂಜೆ ಕಾಫಿ ಅಥವಾ ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡ ಮಂದಿ ಇಲ್ಲೊಮ್ಮೆ ಕೇಳಿ. ಚಹಾ ಅಥವಾ ಕಾಫಿಯನ್ನು ನೀವು ಮಲಗುವುದಕ್ಕೂ ಹತ್ತು ಗಂಟೆಗಳ ಮೊದಲು ಸೇವಿಸಬೇಕಂತೆ. ಆದರೆ ಇದು ಸಾಧ್ಯವಾಗದಿದ್ದರೆ, ಕನಿಷ್ಟ ಆರು ಗಂಟೆಗಳ ಮೊದಲು ಸೇವಿಸಬಹುದಂತೆ. ಅಂದರೆ, ಸಂಜೆ ನಾಲ್ಕು ಗಂಟೆಗೂ ಮೊದಲು ಕಾಫಿ ಚಹಾ ಸೇವಿಸಿ. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ಪಿತ್ತಕೋಶವನ್ನೂ ಆರೋಗ್ಯವಾಗಿಡುತ್ತದೆ. ಕಾರ್ಟಿಸಾಲ್ ಮಟ್ಟವನ್ನೂ ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಈ ಸಮಯವನ್ನು ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನೀವು ನಿಮ್ಮ ಇಷ್ಟದ ಚಹಾ ಕಾಫಿಯನ್ನು ಕುಡಿಯಬಹುದು