ಜುಲೈ 23ರಂದು ಎದುರಾಳಿಗಳಾದ ಫತಾ ಮತ್ತು ಹಮಾಸ್ ಸೇರಿದಂತೆ 12ಕ್ಕೂ ಹೆಚ್ಚು ಪ್ಯಾಲೆಸ್ತೀನಿ ಸಂಘಟನೆಗಳು ಬೀಜಿಂಗ್ನ ಬೆಂಬಲದೊಡನೆ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ.
12ಕ್ಕೂ ಹೆಚ್ಚು ಪ್ಯಾಲೆಸ್ತೀನಿ ಸಂಘಟನೆಗಳು ಒಂದಾಗಿ ತಾತ್ಕಾಲಿಕ ಒಕ್ಕೂಟ ಸರ್ಕಾರ ಸ್ಥಾಪಿಸಿಕೊಂಡಿವೆ. ಇದನ್ನು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶ್ಲಾಘಿಸಿದ್ದು, ಪ್ರಸ್ತುತ ‘ಬೀಜಿಂಗ್ ಒಪ್ಪಂದ’ ಪ್ಯಾಲೆಸ್ತೀನ್ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಆದರೆ, ಪ್ಯಾಲೆಸ್ತೀನಿಯನ್ ಸಂಘಟನೆಗಳ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಚೀನಾ ನೇತೃತ್ವದಲ್ಲಿ ನಡೆದಿರುವ ಒಪ್ಪಂದ ಈ ಅಸಮಾಧಾನಗಳನ್ನು ಮೀರುವ ಶಕ್ತಿ ಹೊಂದಿರುವ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೊಸ ಒಪ್ಪಂದದ ಕುರಿತ ಮಾತುಕತೆಗಳು ಭಾನುವಾರ, ಜುಲೈ 21ರಂದು ಆರಂಭಗೊಂಡವು. ಈ ಮೂಲಕ 2024ರಲ್ಲಿ ಎರಡನೇ ಬಾರಿಗೆ ಫತಾ ಮತ್ತು ಹಮಾಸ್ ಪ್ರತಿನಿಧಿಗಳು ಬೀಜಿಂಗ್ನಲ್ಲಿ ಭೇಟಿಯಾಗಿದ್ದಾರೆ. ಈಗಾಗಲೇ ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ, ಚೀನಾ ಜಾಗರೂಕವಾಗಿ ಮಧ್ಯ ಪೂರ್ವ ಪ್ರದೇಶದಲ್ಲಿ ತನ್ನ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದೆ. ಚೀನಾ ಜಾಗತಿಕ ಮಟ್ಟದಲ್ಲಿ ಅಮೆರಿಕಾದೊಡನೆ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದು, ಆದ್ದರಿಂದ ತನ್ನ ರಾಜತಾಂತ್ರಿಕ ಗೌರವವನ್ನು ಹೆಚ್ಚಿಸುವ ಸಲುವಾಗಿ ಇಂತಹ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಪ್ರಾದೇಶಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ಯಾಲೆಸ್ತೀನಿನ ನೂತನ ಪ್ರಾದೇಶಿಕ ಒಕ್ಕೂಟ ಸರ್ಕಾರದ ದಾಖಲಾತಿಗಳ ಪ್ರಕಾರ, ನೂತನ ಸರ್ಕಾರ ಗಾಜಾ ಮತ್ತು ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶಗಳ ಆಡಳಿತದ ಜವಾಬ್ದಾರಿ ಹೊಂದಿದೆ. ನೂತನ ತಾತ್ಕಾಲಿಕ ಸರ್ಕಾರಕ್ಕೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುವ ಜವಾಬ್ದಾರಿಯೂ ಇದೆ.