ಬೆಂಗಳೂರು: ಕರ್ನಾಟಕದ ಐಟಿ ಸಂಸ್ಥೆಗಳು ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಈ ಹೊಸ ಪ್ರಸ್ತಾವನೆಯು ಉದ್ಯೋಗಿಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ.
Health Care: ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಮಾತ್ರ ತಿನ್ನಬೇಡಿ; ನಿಮಗೆ ಡೇಂಜರ್!
ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಇನ್ನು ಈ ವಿಚಾರ ತಿಳಿಯಿತ್ತಿದ್ದಂತೆಯೇ ಕಂಪನಿಗಳ ಈ ನಡೆಗೆ ಕಾರ್ಮಿಕ ಸಂಘಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕೆಲಸದ ಅವಧಿ 9ರಿಂದ 14 ಗಂಟೆಗೆ ಹೆಚ್ಚಿಸುವುದರಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಐಟಿ-ಬಿಟಿ ಕಂಪನಿಗಳು ಉದ್ಯೋಗ ಕಡಿತಗೊಳಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಪ್ರಸ್ತಾವನೆಯಂತೆ ಐಟಿ ಉದ್ಯೋಗಿಗಳು, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಸ್ತಾವನೆ ಕುರಿತು ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಐಟಿ ಕಂಪನಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಕುರಿತು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ.
ಐಟಿ ಕಂಪನಿಗಳ ಈ ಪ್ರಸ್ತಾವನೆಗೆ ಆರಂಭದಲ್ಲಿಯೇ ಸಾಕಷ್ಟು ವಿರೋಧ ಕೇಳಿ ಬಂದಿದೆ. ಕರ್ನಾಟಕ ರಾಜ್ಯ ಐಟಿ/ ಐಟಿಇಎಸ್ ನೌಕರರ ಸಂಘ (ಕೆಐಟಿಯು) ಸಹ ಪ್ರಸ್ತಾವನೆಯನ್ನು ವಿರೋಧಿಸಿದೆ. ಈ ಪಸ್ತಾವನೆಗೆ ಒಪ್ಪಿಗೆ ನೀಡಿದರೆ ಕಂಪನಿಗಳು ಈಗಿರುವ 3 ಶಿಫ್ಟ್ಗಳಿಂದ 2 ಶಿಫ್ಟ್ಗಳಿಗೆ ಬದಲಾಗಲಿವೆ. ಆದ್ದರಿಂದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕೆಐಟಿಯು ಅಂದಾಜಿಸಿದೆ.
ಅಲ್ಲದೇ ಈಗಾಗಲೇ ಐಟಿ ಉದ್ಯೋಗಿಗಳು ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ 14 ಗಂಟೆ ಕೆಲಸದ ಅವಧಿಗೆ ಒಪ್ಪಿಗೆ ನೀಡಿದರೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. ಈ ಕುರಿತು ಈಗಾಗಲೇ ನಡೆದಿರುವ ಹಲವು ಸಮೀಕ್ಷೆಗಳನ್ನು ಕೆಐಟಿಯು ಉಲ್ಲೇಖಿಸಿದೆ.
ಐಟಿ ಕಂಪನಿಗಳ ಉದ್ಯೋಗಿಗಳನ್ನು ಸರ್ಕಾರ ಯಂತ್ರದಂತೆ ನೋಡಬಾರದು. ಅವರು ಸಹ ಮನುಷ್ಯರು, 14 ಗಂಟೆಗಳ ಕೆಲಸದ ಅವಧಿಗೆ ಒಪ್ಪಿಗೆ ನೀಡುವುದು ಸರಿಯಲ್ಲ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿವರವಾದ ಅಧ್ಯಯನ ನಡೆಸಬೇಕು ಎಂದು ಐಟಿ ಉದ್ಯೋಗಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.