ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತ ಹಾಗೂ ಸಾವು ಪ್ರಕರಣ ರಾಜಕೀಯವಾಗಿ ಟಾಕ್ ವಾರ್ ಗೆ ವೇದಿಕೆಯಾಗಿದೆ, ನಿನ್ನೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಅಶೋಕ್ ಘಟನಾ ಸ್ಥಳಕ್ಕೆ ಹೋಗಿ ಸಿಎಂ, ಡಿಸಿಎಂ ಮೇಲೆ ಆಕ್ರೋಶ ಹೊರಹಾಕಿದ ಬೆನ್ನಲ್ಲೆ. ಇಂದು ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿ ವಿಪಕ್ಷಗಳ ಮೇಲೆ ಕೆಂಡ ಕಾರಿದ್ರು. ಇದೇ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ಥಳಕ್ಕೆ ಹೋಗಿ ಮೃತರ ಕುಟುಂಬಸ್ಥರನ್ನ ಭೇಟಿಯಾಗಿ ಸರ್ಕಾರದ ವಿರುದ್ಧ ಆಕ್ರೊಶ ಹೊರಹಾಕಿದ್ರು……
ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರುಮಳೆ ಸೃಷ್ಠಿಸುತ್ತಿರುವ ಅವಾಂತರ ಅಷ್ಠಿಷ್ಟಲ್ಲ, ಉತ್ತರ ಕನ್ನಡ ಭಾಗ ಅಕ್ಷರಶಃ ನಡುಗಿಹೋಗಿದೆ. ಗುಡ್ಡಕುಸಿತ, ಪ್ರವಾಹದಂತಹ ಭೀಕರತೆ ಜನರನ್ನ ತತ್ತರಿಸುವಂತೆ ಮಾಡಿದೆ, ಶಿರೂರಿನಲ್ಲಿ ನಡೆದ ಗುಡ್ಡಕುಸಿತ, 7 ಜನರ ಪ್ರಕರಣ ಬೆಚ್ಚಿಬೀಳಿಸುವಂತದ್ದು ಈ ಘಟನೆ ಇದೀಗ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ನಿನ್ನೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಅಶೋಕ ಸ್ಥಳ ಪರಿಶೀಲನೆ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಈ ಮಧ್ಯೆಯೇ ಇಂದು ಸಿಎಂ ಸಿದ್ದರಾಮಯ್ಯ ಶಿರೂರಿಗೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ರು….
ಮಧ್ಯಾಹ್ನ 2.30 ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಶಿರೂರಿಗೆ ಭೇಟಿ ನೀಡಿದ್ರು, ಸಿಎಂಗೆ ಸಚಿವರಾದ ಕೃಷ್ಣಬೈರೇಗೌಡ, ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಅಧಿಕಾರಿಗಳು ಸಾಥ್ ನೀಡಿದ್ರು.ಜೋರು ಮಳೆಯ ನಡುವೆಯೂ ರೈನ್ ಕೋಟ್ ಧರಿಸಿ ಸಿಎಂ ಸ್ಥಳ ಪರಿಶೀಲನೆ ಮಾಡಿದ್ರು. ಕಾರ್ಯಾಚರಣೆ ನಡೆಯುತ್ತಿರುವ ಜಾಗ ಮತ್ತು ಮಣ್ಣು ತುಂಬಿರುವ ರಸ್ತೆಯೂ ಕುಸಿಯುವ ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಹೆಚ್ಚು ಜಾಗರೂಕರಾಗಿರುವಂತೆ ಎಚ್ಚರಿಸಿದ್ರು.
ಗುಡ್ಡ ಕುಸಿತದ ಸ್ಥಳ ದ್ವೀಪದಂತಾಗಿದ್ದು ಸುತ್ತಲೂ ಕಾಳಿ ನದಿ ಭೋರ್ಗರೆದು ಹರಿಯುತ್ತಿದೆ. ನಡುವೆ ಅರ್ಧ ಕುಸಿದ ಗುಡ್ಡ ನಿಂತಿದೆ ಹೀಗಾಗಿ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಉನ್ನತ ಮಟ್ಟದ ತಜ್ಞರಿಂದ ಮಾಹಿತಿ ಪಡೆದು ತಂತ್ರಜ್ಞಾನದ ನೆರವು ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ರು….
ಸ್ಥಳ ವೀಕ್ಷಣೆ ನಂತ್ರ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಗುಡ್ಡಕುಸಿತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ರು. ಅಸೆಂಬ್ಲಿ ನಡಿತಿದ್ರಿಂದ ನಾನು ಬರೋಕೆ ಆಗಿರಲಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರನ್ನ ಕಳಿಸಿದ್ದೆ, ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸೂಚನೆ ಕೊಡ್ತಿದ್ದೆ. ನಾವು ರೆಸ್ಕ್ಯೂ ಆಪರೇಷನ್ ತ್ವರಿತವಾಗಿ ಮಾಡಬೇಕು NDRF, SDRF ನವರು ಕಾರ್ಯಾಚರಣೆ ಮಾಡ್ತಿದ್ದಾರೆ ನೇವಿಯವರು, ಅರ್ಮಿಯವರಿಗೆ ಮನವಿ ಮಾಡಿದ್ದೀವಿ ಮಿಸ್ ಆಗಿರೋ ಇನ್ನುಳಿದವರನ್ನ ಹುಡುಕಲು ಹೇಳಿದ್ದೀವಿ. ಕಳಪೆಕಾಮಗಾರಿ ಆಗಿದ್ರೆ ಯಾರೇ ಇದ್ರು ಕಠಿಣ ಕ್ರಮ ಕೈಗೊಳ್ತೀವಿ ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬ ಆಗಿಲ್ಲ ತ್ವರಿತಗತಿಯಲ್ಲಿ ಕೆಲಸ ಮಾಡ್ತಿದ್ದೀವಿ ನಾನು ಈ ವಿಚಾರದಲ್ಲಿ ರಾಜಕಾರಣ ಮಾಡಲ್ಲ ಯಾರ ಮೇಲು ದೋಷ ಹೊರಿಸಲ್ಲ ಅಂತ ವಿಪಕ್ಷಗಳಿಗೆ ಟಾಂಗ್ ಕೊಟ್ರು….
ಸಿಎಂ ಸಿದ್ದರಾಮಯ್ಯ ಸ್ಥಳಕ್ಕೆ ಬರೋದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೃತರಾದ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ರು. ಸ್ಥಳ ಪರಿಶೀಲನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು ರಾಜ್ಯ ಸರ್ಕಾರ ತಕ್ಷಣ ಕಾರ್ಯಾಚರಣೆಗೆ ಇಳಿಯಬೇಕಿತ್ತು ತಡವಾಗಿದೆ ಅಧಿವೇಶನ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ತಕ್ಷಣ ಇಲ್ಲಿಗೆ ಧಾವಿಸಬೇಕಿತ್ತು. ಜಿಲ್ಲಾಧಿಕಾರಿ, ಇತರ ಅಧಿಕಾರಿಗಳಿಗೆ ಸೂಚನೆ ಕೊಡುವ ಕೆಲಸ ಮಾಡಬೇಕಿತ್ತು. ಜೀವ ಕಳೆದುಕೊಂಡ ಕುಟುಂಬಗಳಿಗೆ, ಮನೆ ಹಾನಿಗೊಳಗಾದವರಿಗೆ , ಸೂರು ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದ್ರು ವಿಜಯೇಂದ್ರ..
ಇನ್ನು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್. ಅಶೋಕ ಇಂದು ಶಿರಾಡಿಘಾಟ್ ನ ರಾಷ್ಟ್ರೀಯ ಹೆದ್ದಾರಿ 75 ರ ಗುಡ್ಡಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ HDK ಸಿಎಂ, ಡಿಸಿಎಂ ವಿರುದ್ಧ ಕಿಡಿಕಾರಿದ್ರು
ನಾನು ರಾಜ್ಯಕ್ಕೆ ಬರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಇವರು. ನಾನು ಬರಲೇಬಾರದು ಎನ್ನುವ ರೀತಿ ಸಿಎಂ, ಡಿಸಿಎಂ ಹಾಗೂ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ ಅಂತ ಆಕ್ರೋಶ ಹೊರಹಾಕಿದ್ರು ಕುಮಾರಸ್ವಾಮಿ. ವಿಪಕ್ಷ ನಾಯಕ ಅಶೊಕ ಸಹ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು ಹಗರಣಗಳಿಂದ ಹೊರಗೆ ಬರಲು ಆಗ್ತಿಲ್ಲ, ಹೀಗಾಗಿ ಬ್ಯುಸಿಯಾಗಿದ್ದಾರೆ.
ರಾಜ್ಯ ಸರ್ಕಾರ ಪರಿಹಾರ ಕೊಡುವ ಕೆಲಸವನ್ನೇ ಶುರುಮಾಡಿಲ್ಲ ಖಜಾನೆಯಲ್ಲಿ ಹಣವಿಲ್ಲ, ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪಾಪರ್ ಆಗಿದೆ ಎಂದ್ರು ಅಶೋಕ…
ಅನಾವೃಷ್ಠಿಯಿಂದ ರಾಜ್ಯದಲ್ಲಿ ಆಗ್ತಿರೋ ಪ್ರವಾಹದ ಭೀಕರತೆಯಲ್ಲಿ ರಾಜಕೀಯ ಬದಿಗಿಟ್ಟು ಜನರ ಸಹಾಯಕ್ಕೆ ನಿಲ್ಲಬೇಕಿದ್ದ ಜನಪ್ರತಿನಿಧಿಗಳು ರಾಜಕೀಯ ವಾಕ್ಸಮರಕ್ಕಿಳಿದಿದ್ದಾರೆ. ಜನ ಸಾವು,ನೋವು, ಹಸಿವಿನಿಂದ ತತ್ತರಿಸ್ತಿದ್ದು ನೆರವಿನ ನಿರೀಕ್ಷೆಯಲ್ಲಿದ್ದಾರೆ ಸಿಎಂ ನೆರವಿನ ಸಹಾಯಹಸ್ತಕ್ಕೆ ಮುಂದಾಗಿದ್ದು ವಿಕ್ಷಗಳ ವಾಗ್ಬಾಣ ಮುಂದುವರೆದಿದೆ. ನಾಳೆ ಸದನದಲ್ಲಿ ಇದೇ ವಿಚಾರ ಪ್ರಸ್ಥಾಪವಾಗಲಿದ್ದು ಮಳೆಯ ಅನಾಹುತ ಸದನದಲ್ಲಿ ವಾಗ್ಯುದ್ಧಕ್ಕೆ ವೇದಿಕೆಯಾಗಲಿದೆ…