ನಮ್ಮ ಮಗು ಮೊಬೈಲ್ ಇಲ್ಲದೆ ಏನೂ ಮಾಡಲ್ಲ, ಸರಿಯಾಗಿ ಊಟ-ತಿಂಡಿ ಮಾಡಲ್ಲ, ನಿದ್ದೆ ಮಾಡಲ್ಲ ಎಂದು ಪೋಷಕರು ಬೇಸರದಿಂದ ಹೇಳುವುದನ್ನು ನಾವು ಅನೇಕ ಕಡೆ ನೋಡುತ್ತೇವೆ. ಆದರೆ ಇನ್ನೂ ಸರಿಯಾಗಿ ಬೆಳವಣಿಗೆ ಕಾಣದ ಮಗುವಿನ ಮೆದುಳು, ನಗರಳು, ಕಣ್ಣು, ಕೈಗೆ ಮೊಬೈಲ್ ಸ್ಕ್ರೀನ್ ನೋಡುವುದರಿಂದ ಯಾವ ರೀತಿ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಅರಿವಾಗುವುದು ಪರಿಸ್ಥಿತಿ ಕೈಮೀರಿದ ನಂತರ. ಇದೊಂದು ಕಾಯಿಲೆಯಾಗಿ ಮಾರ್ಪಾಡಾಗುತ್ತದೆ ಎನ್ನುತ್ತಾರೆ ವೈದ್ಯರು.
Dinesh Gundu Rao: BBMP ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದೇವೆ: ದಿನೇಶ್ ಗುಂಡೂರಾವ್
ಒಂದು ಮಗು ಆರೋಗ್ಯವಂತರ ಮನುಷ್ಯನಾಗಿ ಭವಿಷ್ಯದಲ್ಲಿ ಬೆಳೆಯಲು ಮೊದಲಿನ 5 ವರ್ಷಗಳಲ್ಲಿ ಪಂಚೇಂದ್ರಿಯಗಳು ಸರಿಯಾಗಿ ಪ್ರಚೋದನೆ ನೀಡಿ ಕೆಲಸ ಮಾಡಿದರೆ ಮಾತ್ರ ಮಗುವಿನ ಮೆದುಳು ಸರಿಯಾಗಿ ಕೆಲಸ ಮಾಡುತ್ತದೆ. ಸ್ಮಾರ್ಟ್ ಫೋನ್ ನೋಡುತ್ತಾ ಪುಟ್ಟ ಮಕ್ಕಳ ಕಣ್ಣು ಮತ್ತು ಕಿವಿ ಹೆಚ್ಚು ಪ್ರಚೋದನೆಗೆ ಒಳಗಾದಾಗ ಮಕ್ಕಳಲ್ಲಿ ಬೇರೆ ಅಂಗಾಂಗಗಳ ಬೆಳವಣಿಗೆ ಅಥವಾ ಇಡೀ ದೇಹದ ಒಟ್ಟಾರೆ ಬೆಳವಣಿಗೆ ಸಾಧ್ಯತೆ ಇರುವುದಿಲ್ಲ.
ಮೊಬೈಲ್ ನಲ್ಲಿ ಬರುವ ವಿಡಿಯೊಗಳು ಮಕ್ಕಳ ಮೆದುಳಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಒಂದು ರೀತಿಯಲ್ಲಿ ಚಟವಾಗಿ ಮಾರ್ಪಾಡಾಗುತ್ತದೆ. ಇದು ಮುಂದೆ ಶಾಲೆಗೆ ಹೋಗಲು ಪ್ರಾರಂಭಿಸುವಾಗ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ವರ್ತನೆಯಲ್ಲಿ ಅಸಹಜತೆಗೆ ಕಾರಣವಾಗುತ್ತದೆ. ಮಕ್ಕಳ ಶಾರೀರಿಕ ಚಟುವಟಿಕೆ, ಶೈಕ್ಷಣಿಕ ಕಲಿಕೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮೊಬೈಲ್, ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆಯೇ ಇದಕ್ಕೆ ಕಾರಣ ಎಂದು ವೈದ್ಯಕೀಯದಲ್ಲಿ ಸಾಬೀತಾಗಿದೆ.
ಇನ್ನು ಇಂದು ಸೋಷಿಯಲ್ ಮೀಡಿಯಾದ ಪ್ರಭಾವ ಸಮಾಜದಲ್ಲಿ ಹೆಚ್ಚಾಗಿದೆ. ಮಕ್ಕಳು ದೊಡ್ಡವರಾಗುತ್ತಾ ಅವರಿಗೆ ಬಾಹ್ಯ ಪ್ರಪಂಚ ಸೋಷಿಯಲ್ ಮೀಡಿಯಾದ ಮೂಲಕ ಪ್ರಭಾವ ಬೀರಿ ಹದಿಹರೆಯದಲ್ಲಿ ತಮ್ಮ ಮೇಲೆ ನಂಬಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಇನ್ಸ್ಟಾಗ್ರಾಂ ಫಾಲೋವರ್ಸ್, ರೀಲ್ಸ್ ಗಳು, ಸೋಷಿಯಲ್ ಮೀಡಿಯಾ ಸ್ಟೇಟಸ್, ಅಲ್ಲಿ ಬರುವ ಸಂಗತಿಗಳಿಗೆ ಹೆಚ್ಚು ಒತ್ತು ಕೊಡುತ್ತಾ, ತಲೆಕೆಡಿಸಿಕೊಳ್ಳುವುದರಿಂದ ಸಣ್ಣಪುಟ್ಟ ಸಂಗತಿಗಳಿಗೂ ಹದಿಹರೆಯದಲ್ಲಿ ತಲೆಕೆಡಿಸಿಕೊಳ್ಳುತ್ತಾರೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ.
21ನೇ ಶತಮಾನದಲ್ಲಿ ಇಂದು ಭಾರತ ಸೇರಿದಂತೆ ವಿಶ್ವಾದ್ಯಂತ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ತಂತ್ರಜ್ಞಾನದಿಂದ ಹಿಂದೆಯೂ ಇಂದೂ ಮತ್ತು ಭವಿಷ್ಯದಲ್ಲಿಯೂ ಅನೇಕ ಉತ್ತಮ ಪ್ರಗತಿ ಕೆಲಸಗಳು ಆಗಿವೆ ಮತ್ತು ಆಗುತ್ತವೆ ಕೂಡ. ಸೋಷಿಯಲ್ ಮೀಡಿಯಾದಿಂದ ಸಾಕಷ್ಟು ಪ್ರಯೋಜನಗಳಿವೆ. ಹಲವರಿಗೆ ಜೀವನದಲ್ಲಿ ಆದಾಯಕ್ಕೆ ದಾರಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಷಯಗಳು ನಮಗೆ ಸಿಗುತ್ತವೆ, ಮಾಹಿತಿ, ಜ್ಞಾನ, ಮನರಂಜನೆ ಸಿಗುತ್ತದೆ.
ಆದರೆ ಅನೇಕ ಮಕ್ಕಳಲ್ಲಿ ಇದು ಅವರ ಶಿಕ್ಷಣಕ್ಕೆ ಸದ್ಭಳಕೆಯಾಗುತ್ತಿಲ್ಲ. ಸೋಷಿಯಲ್ ಮೀಡಿಯಾದ ಗೀಳಿನಲ್ಲಿ ಅನೇಕ ಹದಿಹರೆಯದವರು ದಾರಿ ತಪ್ಪುತ್ತಿದ್ದಾರೆ. ಅವರ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗುತ್ತಿದೆ. ಇತ್ತೀಚೆಗೆ ಮಕ್ಕಳು ತಂತ್ರಜ್ಞಾನ ಮೇಲೆ ಹೆಚ್ಚು ಅವಲಂಬಿತವಾಗಿ ಬೇರೆ ರೀತಿಯ ಶಾರೀರಿಕ ಚಟುವಟಿಕೆ, ಇತರರೊಂದಿಗೆ ಸಂವಹನ ಕೊರತೆ, ಮಾನಸಿಕವಾಗಿ ಯೋಚಿಸುವ ಮಟ್ಟ ಕಡಿಮೆಯಾಗಿ ಆರೋಗ್ಯ ತುಂಬಾ ಹಾಳಾಗುತ್ತಿದೆ.
ಆರಂಭದಲ್ಲಿ 5 ವರ್ಷ ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲು ಹೋಗಲೇಬೇಡಿ, ಮಗು ಹಠ ಮಾಡುತ್ತದೆ, ಸರಿಯಾಗಿ ಊಟ-ತಿಂಡಿ ಮಾಡುವುದಿಲ್ಲ ಎಂದು ಸ್ಮಾರ್ಟ್ ಫೋನ್ ತೋರಿಸಿ ತಿನ್ನಿಸುವ ಅಭ್ಯಾಸ ಮಾಡಲೇಬೇಡಿ. ಬೇರೆ ರೀತಿಯಲ್ಲಿ ಮಗುವನ್ನು ತಾಳ್ಮೆಯಿಂದ ನಿಭಾಯಿಸಿ ಅವರಿಗೆ ಊಟ-ತಿಂಡಿ ತಿನ್ನಿಸಿ, ಆರಂಭದಲ್ಲಿ ನಾಲ್ಕೈದು ವರ್ಷ ಅವರ ಸಂವಹನ, ಶಾರೀರಿಕ ಚಟುವಟಿಕೆಗಳತ್ತ ಗಮನ ಹರಿಸಿ.
ಮನೆಯಲ್ಲಿ ಮಕ್ಕಳನ್ನು ಸ್ಮಾರ್ಟ್ ಫೋನ್, ಮೊಬೈಲ್ ಪ್ರಪಂಚದಿಂದ ದೂರವಿಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿದ್ದರೂ ದಿನದಲ್ಲಿ ಒಂದೆರಡು ಗಂಟೆ ಮಾತ್ರ ಕೊಡಿ, ಅದು ಕೂಡ ಮಧ್ಯೆ ಅರ್ಧ ಗಂಟೆಗೊಮ್ಮೆ ಅವರ ಮನಸ್ಸು, ಕಣ್ಣನ್ನು ಬೇರೆಡೆಗೆ ಹರಿಯುವಂತೆ ದೊಡ್ಡವರು ಮಾಡಬೇಕು, ನಿರಂತರವಾಗಿ ಮೊಬೈಲ್ ಸ್ಕ್ರೀನ್ ನೋಡುವುದು ಒಳ್ಳೆಯದಲ್ಲ ಎಂದು ಹೇಳಲಾಗಿದೆ.