ನಿಂಬೆಯಿಂದ ಮಾಡಿದ ಆಹಾರ ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ನಿಂಬೆಹಣ್ಣನ್ನು ಬಳಸುವುದರಿಂದ ಕೆಲವು ರೋಗಗಳಿಂದ ಮುಕ್ತಿ ಪಡೆಯಬಹುದು. ತೂಕ ಇಳಿಸಿಕೊಳ್ಳುವವರು ಪ್ರತಿದಿನ ಬೆಳಗ್ಗೆ ಲೆಮನ್ ವಾಟರ್ ಕುಡಿಯುವುದು ಸಾಮಾನ್ಯವಾಗಿದೆ. ಬಿಸಿಯಾದ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹ ಸ್ವಚ್ಛಗೊಳ್ಳುತ್ತದೆ.
ನಿಂಬೆ ರಸವನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ. ನೀವು ನಿಂಬೆಹಣ್ಣಿನಿಂದ ವಿಟಮಿನ್ ಸಿ, ಪೋಷಕಾಂಶಗಳು ಮತ್ತು ಖನಿಜಗಳನ್ನು ಪಡೆಯಬಹುದು. ನಿಂಬೆ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ನಿಂಬೆಹಣ್ಣುಗಳನ್ನು ಸ್ವಚ್ಛವಾಗಿ ತೊಳೆಯಿರಿ. ಅವುಗಳನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಬೇಕು.
ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ
ನಿಂಬೆ ಹಣ್ಣಿನಲ್ಲಿರುವ ಕೆಲವೊಂದು ಅಂಶಗಳು ಮನುಷ್ಯನ ಯಕೃತ್ ನಲ್ಲಿ ಬೈಲ್ ಜ್ಯೂಸ್ ಉತ್ಪಾದನೆಯನ್ನು ವೃದ್ಧಿಸುತ್ತವೆ. ಇದು ಆರೋಗ್ಯಕರ ಜೀರ್ಣ ವ್ಯವಸ್ಥೆಗೆ ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಜೀರ್ಣ ಪ್ರಕ್ರಿಯೆಗೆ ಸಂಬಂಧ ಪಟ್ಟ ಸಮಸ್ಯೆಗಳಾದ ಮಲಬದ್ಧತೆ, ಹೊಟ್ಟೆಯ ಉಬ್ಬರ ಮತ್ತು ಭೇದಿಯಂತಹ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ನಿಂಬೆ ಹಣ್ಣು ಮತ್ತು ಜೇನು ತುಪ್ಪದ ಮಿಶ್ರಣ ಮನುಷ್ಯನ ದೇಹದ ಒಳಗಿನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿ ಬಲಪಡಿಸುತ್ತದೆ. ಇದರಲ್ಲಿ ಆಂಟಿ – ಮೈಕ್ರೋಬಿಯಲ್ ಗುಣ ಲಕ್ಷಣಗಳಿದ್ದು, ಇವುಗಳು ದೇಹಕ್ಕೆ ಎದುರಾಗುವ ಸೋಂಕುಗಳು ಮತ್ತು ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳನ್ನು ತಡೆಗಟ್ಟುತ್ತವೆ.
ಶಕ್ತಿಯ ಸಂಚಲನ ಹೆಚ್ಚಿಸುತ್ತದೆ
ಒಬ್ಬ ಆರೋಗ್ಯಕರ ಮನುಷ್ಯನ ದಿನ ನಿತ್ಯದ ಕೆಲಸಗಳಿಗಾಗಿ ಅಗತ್ಯವಾಗಿ ಬೇಕಾಗಿರುವುದು ಆತನ ದೈಹಿಕ ಸಾಮರ್ಥ್ಯ ಮತ್ತು ಶಕ್ತಿ. ನಿಂಬೆ ಹಣ್ಣಿನಲ್ಲಿ ವಿಟಮಿನ್ ‘ ಬಿ ‘, ವಿಟಮಿನ್ ‘ ಸಿ ‘, ಪಾಸ್ಪರಸ್, ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನ್ ಅಂಶಗಳು ಯಥೇಚ್ಛವಾಗಿದ್ದು, ಇವುಗಳು ಮನುಷ್ಯನ ದೇಹದಲ್ಲಿ ನೈಸರ್ಗಿಕ ಶಕ್ತಿಯ ಉತ್ತೇಜಕಗಳಾಗಿ ಕೆಲಸ ಮಾಡುತ್ತವೆ. ಸೇವಿಸಿದ ಕೇವಲ ಕೆಲವೇ ನಿಮಿಷಗಳಲ್ಲಿ ನಿಂಬೆ ಹಣ್ಣಿನ ರಸ ನಿಮ್ಮ ಇಡೀ ದೇಹವನ್ನು ಆಮ್ಲಜನಕಯುಕ್ತವಾಗಿ ಪರಿವರ್ತಿಸುತ್ತದೆ. ಇದರಲ್ಲಿ ನಕಾರಾತ್ಮಕ ಅಯಾನುಗಳು ಇರುವುದರಿಂದ ದೇಹಕ್ಕೆ ಶಕ್ತಿ ಸುಲಭವಾಗಿ ಲಭಿಸುತ್ತದೆ. ನಿಮ್ಮ ದೇಹ ಕೆಲವೇ ಸಮಯದಲ್ಲಿ ಪುನಶ್ಚೇತನಗೊಳ್ಳುತ್ತದೆ.
ದೇಹದ ತೂಕ ಕಡಿಮೆಯಾಗುತ್ತದೆ
ಬಹಳ ದಿನಗಳಿಂದ ತಮ್ಮ ಬೊಜ್ಜು ತುಂಬಿದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬರಿಗೂ ನಿಂಬೆ ಹಣ್ಣಿನ ಜ್ಯೂಸ್ ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಪೆಕ್ಟಿನ್ ಎಂಬ ನಾರಿನ ಅಂಶ ಅಧಿಕವಾಗಿದ್ದು, ನಿಮ್ಮ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ಬಹಳ ಹೊತ್ತಿನ ತನಕ ಹೊಟ್ಟೆ ಹಸಿವು ಆಗದಂತೆ ಮತ್ತು ಆಹಾರ ಸೇವನೆ ಮಾಡದಂತೆ ನೋಡಿಕೊಳ್ಳುತ್ತದೆ. ನಿಮ್ಮ ಸೊಂಟದ ಭಾಗದ ಬೇಡದ ಕೊಬ್ಬಿನ ಅಂಶವನ್ನು ನಿಂಬೆ ಹಣ್ಣಿನ ಜೂಸ್ ಕಡಿಮೆ ಮಾಡುತ್ತದೆ ಎಂದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಿ.
ಜೀರ್ಣ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ
ಮನುಷ್ಯನ ದೇಹದಿಂದ ಬೇಡದ ತ್ಯಾಜ್ಯಗಳನ್ನು ಹೊರ ಹಾಕಿ ಜೀರ್ಣ ಕ್ರಿಯೆಯನ್ನು ಬಲ ಪಡಿಸುವುದರಲ್ಲಿ ನಿಂಬೆ ಹಣ್ಣಿನ ಜ್ಯೂಸ್ ಸದಾ ಮುಂದೆ. ಜೊತೆಗೆ ನಾವು ಜೇನು ತುಪ್ಪ ಸೇರಿಸುವುದರಿಂದ ಜೀರ್ಣ ಕ್ರಿಯೆ ಇನ್ನಷ್ಟು ಉತ್ತಮಗೊಳ್ಳುತ್ತದೆ.
ಮಲಬದ್ಧತೆ ನಿವಾರಣೆಯಾಗುತ್ತದೆ
ನಿಂಬೆ ಹಣ್ಣಿನಲ್ಲಿರುವ ಆಮ್ಲಿಯ ಅಂಶ ಮನುಷ್ಯನ ದೇಹದ ಕರುಳಿನ ಚಲನೆಯಲ್ಲಿ ಸಹಾಯಕವಾಗುತ್ತದೆ. ನಿಂಬೆ ಹಣ್ಣಿನ ಜ್ಯೂಸ್ ಚೆನ್ನಾಗಿ ಕುದಿಸಿ ಆರಿಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ದೇಹದಲ್ಲಿ ಶಕ್ತಿ ಹೆಚ್ಚುತ್ತದೆ
ನಿಂಬೆ ಹಣ್ಣಿನ ಜ್ಯೂಸ್ ಮನುಷ್ಯನ ದೇಹದಲ್ಲಿ ಶಕ್ತಿಯ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ. ಕೇವಲ ನಿಂಬೆ ಹಣ್ಣಿನ ತಿರುಳು ಮಾತ್ರವಲ್ಲದೆ ಅದನ್ನು ಕುದಿಸಿದಾಗ ಹೊರ ಬರುವ ಸುವಾಸನೆ ಕೂಡ ದೇಹದ ಶಕ್ತಿ ಉತ್ಪಾದನೆಯಲ್ಲಿ ತನ್ನದೇ ಆದ ಪ್ರಭಾವ ಹೊಂದಿದೆ. ಹಾಗಾಗಿ ನಿಂಬೆ ಹಣ್ಣಿನ ಎಲ್ಲಾ ಭಾಗವೂ ಉಪಯೋಗಕ್ಕೆ ಬರುತ್ತದೆ.