ಮಂಡ್ಯ :- ಸುಮಾರು 20 ವರ್ಷಗಳಿಂದ ತಲೆದೋರಿರುವ ಆತಗೂರು ಹೋಬಳಿಯ ರೀ ಸರ್ವೆ ಕಾರ್ಯ ವಿವಿಧ ಕಾರಣಗಳಿಂದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರೈತಾಪಿ ಜನರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಹೀಗಾಗಿ
ಸದನದಲ್ಲಿ ಧ್ವನಿ ಎತ್ತಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಚಾಮನಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿ 2023-24 ನೇ ಸಾಲಿನ ಮದ್ದೂರು ತಾಪಂ ಅನಿರ್ಬಂಧಿತ ಅನುದಾನದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂ- ಮೈ ಎಕ್ಸ್ ಪ್ರೆಸ್ : ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಚಾಲಕನ ಮೇಲೆ FIR ದಾಖಲು!
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಇಡೀ ರಾಜ್ಯದಲ್ಲೇ ಪ್ರಥಮವಾಗಿ ಆತಗೂರು ಹೋಬಳಿಯನ್ನು ರೀ ಸರ್ವೆ ಕಾರ್ಯವನ್ನು ಜಾರಿಗೊಳಿಸಿದ್ದರು. ಆದರೆ, ಕೆಲ ಕಾರಣಾಂತರಗಳಿಂದ ಈ ರೀ ಸರ್ವೆ ಕಾರ್ಯ ಲೋಪ ಉಂಟಾಗಿತ್ತು. ಇದರಿಂದ ಈ ವ್ಯಾಪ್ತಿಯ ಜನರು ಸುಮಾರು 20 ವರ್ಷಗಳಿಂದ ಜಮೀನಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರತಿನಿತ್ಯ ತಾಲೂಕು ಕಚೇರಿ ಹಾಗೂ ವಿವಿಧ ನ್ಯಾಯಾಲಯಗಳಿಗೆ ಅಲೆದಾಟ ನಡೆಸುತ್ತಾ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ರೂಪಿಸುವ ಉದ್ದೇಶದಿಂದ ತಾವು
ಸದನದಲ್ಲಿ ಪ್ರಸ್ತಾಪ ಮಾಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಉದಯ್ ಭರವಸೆ ನೀಡಿದರು.
ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ತೆಂಗಿನ ಮರಕ್ಕೆ ಕಪ್ಪು ತಲೆ ಹುಳು ಕೀಟ ಬಾಧೆ ಕಾಣಿಸಿಕೊಂಡು ತೆಂಗಿನ ಮರಗಳು ಒಣಗುವ ಮೂಲಕ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಈ ಸಂಬಂಧ ಸರ್ಕಾರದ ಗಮನಕ್ಕೆ ತಂದು ಕೀಟ ಬಾಧೆ ನಿಯಂತ್ರಣ ಹಾಗೂ ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ ಎಂದರು.
ತಾಲೂಕಿನ ಕೊನೆ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟು ನೀರು ಸರಾಗವಾಗಿ ತಲುಪದಿರುವ ಬಗ್ಗೆ ರೈತರು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದಾರೆ. ಹೀಗಾಗಿ ಈ ವ್ಯಾಪ್ತಿಯ ನಾಲೆಗಳ ಆಧುನೀಕರಣಗೊಳಿಸಿ ಮೊದಲು ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿದು ಕೆರೆ ಕಟ್ಟೆಗಳನ್ನು ತುಂಬಿಸಿದ ಬಳಿಕ ಮೇಲ್ಭಾಗದ ವ್ಯಾಪ್ತಿಗೆ ನೀರು ಹರಿಸುವ ಯೋಜನೆಯನ್ನು ರೂಪಿಸುವಂತೆ ಸದನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರಕ್ಕೆ ಕ್ರಮಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣ ಹಾಗೂ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದು, ಅಗತ್ಯ ಇರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್ ಮುಖಂಡರಾದ ಕುಚೇಲ, ಗೋಪಿ, ಶೇಖರ್, ರಾಜೇಶ್, ಮಾದೇಶ್, ರಾಜಯ್ಯ, ರವಿ, ಮೋಹನ್, ಅನಂತು ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ