ಬೆಂಗಳೂರು: ಬೆಂಗಳೂರಿನ 3,000 ಕಡೆಗಳಲ್ಲಿ ಹೆಚ್ಚುವರಿಯಾಗಿ 750 ಕೃತಕ ಬುದ್ಧಿಮತ್ತೆ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ. ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈಗಾಗಲೇ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕ್ಯಾಮರಾಗಳನ್ನು ನಗರದ ಹೊರವಲಯ ಮತ್ತು ಹೊಸ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿರುವ ಪ್ರಮುಖ ಜಂಕ್ಷನ್ಗಳಲ್ಲಿ ಅಳವಡಿಸಲಾಗುತ್ತದೆ.
ದೇವಾಲಯದ ಆವರಣದಲ್ಲಿ ಕಿಡಿಗೇಡಿಗಳ ಹಾವಳಿ: ರಕ್ಷಣೆಗೆ ಮಹಿಳೆಯರ ಪ್ರತಿಭಟನೆ!
ಮಹಿಳೆಯರಿಗೆ ಕಿರುಕುಳ ಮತ್ತು ಇತರ ಕಾನೂನು ಸುವ್ಯವಸ್ಥೆ ಸಂಬಂಧಿತ ಘಟನೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸುವುದು ಇದರ ಹಿಂದಿನ ಉದ್ದೇಶ. ಇಷ್ಟೇ ಅಲ್ಲದೆ, ಸುರಕ್ಷಿತ ನಗರ ಯೋಜನೆಯ ಭಾಗವಾಗಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 150 ವಾಚ್ ಟವರ್ಗಳು ಮತ್ತು ಎಂಟು ಹೈ ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಹೈ-ಡೆಫಿನಿಷನ್ ಫೇಸ್-ರೆಕಗ್ನಿಷನ್ ಕ್ಯಾಮರಾಗಳು ಸಂಚಾರ ದಟ್ಟಣೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡಲಿವೆ. ವಾಚ್ ಟವರ್ಗಳು ಸಾರ್ವಜನಿಕ ಪ್ರದೇಶಗಳ ಸಮರ್ಪಕ ಚಿತ್ರಣ ಒದಗಿಸಲಿವೆ. ಜತೆಗೆ, ಅಧಿಕಾರಿಗಳು ಘಟನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡಲಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕನಕಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಸರ್ಜಾಪುರ ರಸ್ತೆಯಂತಹ ಪ್ರಮುಖ ಪ್ರದೇಶಗಳು 50 ಹೊಸ ಟ್ರಾಫಿಕ್ ಸಿಗ್ನಲ್ಗಳನ್ನು ಒಳಗೊಂಡಿರಲಿದ್ದು, ಈ ಪ್ರದೇಶಗಳಲ್ಲಿಯೂ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ-ದಕ್ಷಿಣ) ಶಿವ ಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ. ಕ್ಯಾಮರಾಗಳು ವೀಡಿಯೊ ಕಣ್ಗಾವಲು ಸುಗಮಗೊಳಿಸಲಿವೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲೂ ನೆರವಾಗಲಿವೆ ಎಂದು ಶಿವ ಪ್ರಕಾಶ್ ಹೇಳಿದ್ದಾರೆ.