ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಪವಿತ್ರಾ ಗೌಡ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದೆ. ಇತ್ತೀಚೆಗೆ ಜೈಲೂಟ ಸೇರದೆ ನಟ ದರ್ಶನ್ ವಾಂತಿ, ಭೇದಿ ಅನುಭವಿಸಿದ್ದರು. ಬಳಿಕ ಜೈಲಿನಲ್ಲೇ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆದು ಸರಿ ಹೋಗಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಗೂ ಸಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಅವರಿಗೂ ಸಹ ಆರೋಗ್ಯ ಸಮಸ್ಯೆ ಎದುರಾಗಿದೆ. ಅವರೂ ಸಹ ಜೈಲಿನಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ದರ್ಶನ್ ರಂತೆಯೇ ಪವಿತ್ರಾ ಗೌಡಗೂ ಸಹ ಜೈಲಿನ ಆಹಾರ ದೇಹಕ್ಕೆ ಸರಿಹೊಂದುತ್ತಿಲ್ಲವಂತೆ. ಅಲ್ಲದೆ ಮಾನಸಿಕವಾಗಿ ಪವಿತ್ರಾ ಗೌಡ ಕುಗ್ಗಿದ್ದಾರೆ. ಹೀಗಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆ ವಾರ್ಡ್ ನಲ್ಲಿ ಜನರಲ್ ಚೆಕಪ್ ಮಾಡಿಸಿದ್ದಾರೆ. ಸದ್ಯ ಪವಿತ್ರಾ ಗೌಡ ಅವರ ಆರೋಗ್ಯ ಸುಧಾರಣೆ ಕಂಡಿದ್ದು, ಉಪಹಾರದ ಬದಲಿಗೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರಂತೆ.
ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸುವ ಮುನ್ನವೂ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಪೊಲೀಸರು ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಾಗಲೂ ಸಹ ಎರಡು ಬಾರಿ ಬಿಪಿ ಲೋ ಹಾಗೂ ಇತರೆ ಸಮಸ್ಯೆಗಳಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈಗ ಜೈಲಿನಲ್ಲಿಯೂ ಪವಿತ್ರಾಗೆ ಅನಾರೋಗ್ಯ ಮುಂದುವರೆದಿದೆ.