ಸಣ್ಣ ಆಗಲು ಸಾಕಷ್ಟು ಮಂದಿ ಅನೇಕ ರೀತಿ ವರ್ಕೌಟ್, ಡಯೆಟ್ ಎಂಬೆಲ್ಲಾ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಮತ್ತೆ ಕೆಲವರಿಗೆ ವ್ಯಾಯಾಮ ಮಾಡಲು ಮೂಡ್ ಇರುವುದಿಲ್ಲ. ಆದರೂ ತೂಕ ಇಳಿಕೆಗಾಗಿ ಕಷ್ಟಪಟ್ಟು ವ್ಯಾಯಾಮ ಮಾಡುತ್ತಾರೆ. ಆದರೆ ಇರುವ ತೂಕವನ್ನು ಮೆಂಟೇನ್ ಮಾಡಬೇಕು, ಹೆಚ್ಚುತ್ತಿರುವ ತೂಕ ನಿಯಂತ್ರಿಸಲು ಆರೋಗ್ಯಕರ ಪದಾರ್ಥಗಳನ್ನೇ ಸೇವನೆ ಮಾಡುವ ಮೂಲಕವೂ ಸ್ಲಿಮ್ ಆಗಬಹುದು. ಅದು ಹೇಗಪ್ಪಾ ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಅಡುಗೆಯಲ್ಲಿ ಮೇಕ್ ಓವರ್ ಮಾಡಿ: ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಾಗಿ ಕೊಬ್ಬು ಕಡಿಮೆ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಹುದು. ಅಡುಗೆಮನೆಯಲ್ಲಿ ಆರೋಗ್ಯಕರ ಪದಾರ್ಥಗಳ ಸೇವನೆಗೆ ಒತ್ತು ನೀಡಿ. ಫ್ರಿಜ್ನಲ್ಲಿರುವ ಜಂಕ್ ಫುಡ್ ಸೇವನೆ ತಪ್ಪಿಸಿ. ನಾಲಿಗೆ ರುಚಿಗಿಂತ ಆರೋಗ್ಯ ರುಚಿಗೆ ಮಹತ್ವ ನೀಡಿ. ಎಲ್ಲಾ ರೀತಿಯ ಹಸಿರು ತರಕಾರಿಗಳು, ಹಣ್ಣಿನ ಜ್ಯೂಸ್ಗಳು, ಬೀಜಗಳು ಸೇವನೆ ಮಾಡಿ. ವೇಟ್ ಲಾಸ್ ದ್ರವ ಪದಾರ್ಥ ಸೇವನೆ ಮಾಡಿ.
ಬೆಳಗ್ಗೆ ಮೆಂತ್ಯ ನೀರು ಕುಡಿಯಿರಿ: ತೂಕ ಕಡಿಮೆ ಮಾಡಲು ಉಗುರು ಬೆಚ್ಚಗಿನ ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಿ ಕುಡಿಯಿರಿ. ಜೊತೆಗೆ ನೀವು ವಾರದ ಕೆಲವು ದಿನವನ್ನು ಮೆಂತ್ಯ ನೀರಿನ ಸೇವನೆಯೊಂದಿಗೆ ಆರಂಭಿಸಿ. ಎರಡು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಮೆಂತ್ಯ ನೀರು ಸೇವನೆ ಮಾಡಿ
ಗ್ರೀನ್ ಟೀ: ಗ್ರೀನ್ ಟೀ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬೊಜ್ಜು ಕಡಿಮೆ ಮಾಡಲು ಗ್ರೀನ್ ಟೀ ಕುಡಿಯುವುದು ಸರಳ ಪರಿಹಾರವಾಗಿದೆ ಎಂದು ಹಲವು ಸಂಶೋಧನೆಗಳು ಹೇಳಿವೆ.ಕೆಲವೊಮ್ಮೆ ಸ್ಥೂಲಕಾಯವು ಹೃದ್ರೋಗ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅಂತಹ ವೇಳೆ ಗ್ರೀನ್ ಟೀ ರೋಗಗಳಿಂದ ರಕ್ಷಣೆ ನೀಡುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಕ್ಯಾಟೆಚಿನ್ ದೇಹದಲ್ಲಿ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತದೆ.
ಸಮತೋಲನ ಆಹಾರ: ತೆಳ್ಳಗಾಗಲು ಕಡಿಮೆ ತಿನ್ನಬೇಕೆಂದಲ್ಲ. ಆದರೆ ಯಾವಾಗಲೂ ಸಮತೋಲಿತ ಆಹಾರ ಸೇವಿಸಬೇಕು. ನಿಮ್ಮ ಆಹಾರದಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು, ಹಸಿರು ತರಕಾರಿ, ಹಣ್ಣು ಸೇರಿಸಿ. ಒಂದೇ ಸಮಯದಲ್ಲಿ ಹೆಚ್ಚು ತಿನ್ನಬೇಡಿ. ಆಹಾರವನ್ನು ಸಣ್ಣ ಭಾಗವಾಗಿ ನಾಲ್ಕು ಹೊತ್ತು ಸೇವಿಸಿ. ಹಾಗೂ ಕಡಿಮೆ ಕ್ಯಾಲೋರಿ ಪದಾರ್ಥ ಸೇವಿಸಿ.
ನಿಧಾನವಾಗಿ ಅಗಿದು ತಿನ್ನಿ: ಆಹಾರ ಸೇವಿಸುವಾಗ ನಿಧಾನವಾಗಿ ಅಗಿದು ತಿನ್ನಬೇಕು. ಆತುರದಲ್ಲಿ ಸೇವಿಸಬೇಡಿ. ಆಹಾರದ ಜೊತೆಗೆ ನೀರು ಕುಡಿಯುವ ಬದಲು ಆಹಾರವನ್ನು ನಿಧಾನವಾಗಿ ಮತ್ತು ಸಂಪೂರ್ಣವಾಗಿ ಅಗಿದು ಸೇವಿಸಿ. ಆಹಾರವನ್ನು ಸರಿಯಾಗಿ ಅಗಿದು ತಿನ್ನದೇ ಹೋದರೆ ಅದು ಹೊಟ್ಟೆಯ ಸಮಸ್ಯೆಗೆ ಕಾರಣ ಆಗುತ್ತದೆ. ಜೊತೆಗೆ ತೂಕ ಹೆಚ್ಚಿಸುತ್ತದೆ. ಹಾಗಾಗಿ ಆಹಾರವನ್ನು ಚೆನ್ನಾಗಿ ಅಗಿದು, ನಿಧಾನವಾಗಿ ತಿನ್ನಿ