ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಜೈಲು ಸೇರಿದ್ದಾರೆ.
ಇನ್ನೂ ತಮ್ಮ ನೆಚ್ಚಿನ ನಟ ಜೈಲಿಗೆ ಸೇರುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಕೆಲವರು ಅತಿರೇಕದ ವರ್ತನೆಗಳನ್ನು ತೋರಿಸಿದ್ದು ಕೂಡ ಉಂಟು. ಈಗ ದರ್ಶನ್ ಅವರು ಜೈಲಿನಿಂದಲೇ ಅಭಿಮಾನಿಗಳ ಬಗ್ಗೆ ವಿಚಾರಿಸಿದ್ದಾರೆ. ವಕೀಲರಾದ ನಾರಾಯಣಸ್ವಾಮಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ವಕೀಲ ನಾರಾಯಣಸ್ವಾಮಿ ಅವರು ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಭೇಟಿ ಆಗಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಕೆಲವು ವಿಚಾರ ತಿಳಿಸಿದ್ದಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ವಕೀಲರು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಾಮೀನು ಪ್ರಕ್ರಿಯೆಗಳ ಬಗ್ಗೆ ಮಾತುಕತೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮುಂದಿನ ಕಾನೂನು ಹೋರಾಟದ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಮಾಡಿದ್ದಾರೆ.
ಈ ಮಾತುಕತೆ ಸಲುವಾಗಿ ವಕೀಲರು ದರ್ಶನ್ ಅವರನ್ನು ಭೇಟಿ ಆದಾಗ ಅಭಿಮಾನಿಗಳ ವಿಷಯ ಕೂಡ ಪ್ರಸ್ತಾಪ ಆಗಿದೆ. ಜೈಲಿನಲ್ಲಿ ಇರುವ ದರ್ಶನ್ ಅವರು ಅಭಿಮಾನಿಗಳ ಬಗ್ಗೆ ವಿಚಾರಿಸುವುದನ್ನು ಮರೆತಿಲ್ಲ! ಅಭಿಮಾನಿಗಳು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ದರ್ಶನ್ ಮನವಿ ಮಾಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.