ಬೆಂಗಳೂರು:- ದಿನದಿಂದ ದಿನಕ್ಕೆ ಬೆಂಗಳೂರು ಸೇರಿ ರಾಜ್ಯದಾದ್ಯಂತ ಡೆಂಗ್ಯೂ ಆರ್ಭಟ ಹೆಚ್ಚಾಗಿದ್ದು, ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಹೊರಡಿಸಿದೆ.
ಬೆಂಗಳೂರು, ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಿಜೆ ಎನ್ವಿ ಅಂಜಾರಿಯಾ ಮತ್ತು ನ್ಯಾ. ಕೆ.ವಿ ಅರವಿಂದ್ ಅವರಿದ್ದ ಪೀಠ ಆತಂಕ ವ್ಯಕ್ತಪಡಿಸಿದೆ.
ನಾಗರಿಕರಿಗೆ ಆರೋಗ್ಯ ಹಾಗೂ ಚಿಕಿತ್ಸೆ ಹಕ್ಕಿದೆ. ನಾಗರಿಕರಿಗೆ ಆರೋಗ್ಯಕರ ಪರಿಸರದಲ್ಲಿ ಬದುಕುವ ಹಕ್ಕಿದೆ. ಗ್ರಾಮೀಣ ಹಾಗೂ ನಗರದಲ್ಲಿ ವೈದ್ಯಕೀಯ ಸೌಲಭ್ಯಗಳು, ಸೊಳ್ಳೆಗಳ ಸಂತಾನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಜನಜಾಗೃತಿ ಕ್ರಮಗಳ ಬಗ್ಗೆ ವಿವರ ನೀಡಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಒಂದೇ ದಿನದಲ್ಲಿ ಬೆಂಗಳೂರಿನಲ್ಲೇ 91 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇನ್ನು ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಅತೀ ವೇಗವಾಗಿ ಹೆಚ್ಚಳವಾಗುತ್ತಿವೆ. ಚಿಕ್ಕಮಗಳೂರಿನಲ್ಲಿ 521, ಮೈಸೂರಿನಲ್ಲಿ 496, ಹಾವೇರಿಯಲ್ಲಿ 481, ಧಾರವಾಡದಲ್ಲಿ 289, ಚಿತ್ರದುರ್ಗದಲ್ಲಿ 275 ಪ್ರಕರಣಗಳು ಕಂಡಬಂದಿವೆ.