ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೂಡಲೇ ಸಮಗ್ರ ಪರಿಶೀಲನೆ ನಡೆಸಿ ಅನರ್ಹ ಬಿಪಿಎಲ್ ಕಾರ್ಡ್ ಕೈಬಿಡಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಬಿಪಿಎಲ್ ಕುಟುಂಬಗಳಲ್ಲಿನ ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಜನರನ್ನು ಅನಗತ್ಯವಾಗಿ ಅಲೆದಾಡಿಸಬಾರದು. ಅವರ ಸಮಸ್ಯೆ, ದೂರುಗಳನ್ನು ಆಲಿಸಿ ಅಗತ್ಯ ಪರಿಹಾರ ಒದಗಿಸಬೇಕು ಎಂದು ಸೂಚಿಸಿದ್ದಾರೆ.
ಕೆಲವರು ಕಾರ್ಡ್ ಹೊಂದಲು ಅನರ್ಹರಾದರೂ ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಅಂತಹವರನ್ನ ಹುಡುಕಿ ಕಾರ್ಡ್ಗಳನ್ನು ರದ್ದುಗೊಳಿಸಿ ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಶೇ. 80 ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ. ತಮಿಳುನಾಡಿನಲ್ಲಿ ಶೇ.40 ರಷ್ಟಿದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ.5.67 ಇರಬೇಕು ಎಂದು ವಿವರಿಸಿದ್ದಾರೆ. ಇದೀಗ ಸಿಎಂ ಖಡಕ್ ಸೂಚನೆ ಹಿನ್ನೆಲೆ ಈಗಾಗಲೇ ಪರಿಶೀಲನೆ ಮಾಡಿಟ್ಟಿರುವ ಪಟ್ಟಿ ಪುನರ್ ಪರಿಶೀಲನೆ ಮಾಡಿ ನಿಯಮ ಮೀರಿ ಪಡೆದಿರುವ ಕಾರ್ಡ್ಗಳನ್ನ ಡಿಲೀಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಬಡತನ ರೇಖೆಗಿಂತ ಮೇಲಿರುವ ಸ್ಥಿತಿವಂತರ ಕಾರ್ಡ್ಗಳನ್ನ ಪರಿಶೀಲನೆ ನಡೆಸಲಿದ್ದಾರೆ. ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ವೈಟ್ ಬೋರ್ಡ್ ಕಾರು ಹೊಂದಿರುವವರು, ಸ್ವಂತ ಕೃಷಿ ಉಪಕರಣ (ಟ್ರಾಕ್ಟರ್, ಟಿಲ್ಲರ್) ಹೊಂದಿರುವವರು, ಸ್ವಂತ ಜಮೀನು, ಹಲವು ಪ್ಲ್ಯಾಟ್ ಹೊಂದಿದವರ ಮೇಲೆ ಅಧಿಕಾರಿಗಳು ಕಣ್ಣಿಡಲಿದ್ದಾರೆ.