ಪಾಟ್ನಾ: ಬಿಹಾರದ ಬೇಗುಸರಾಯ್ನಲ್ಲಿ ಆಟೋ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಇತರ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಮಾರಿಯಾದಿಂದ ಝೆರೊಮೈಲ್ ಕಡೆಗೆ ಪ್ರಯಾಣಿಸುತ್ತಿದ್ದ ಆಟೋ ರತನ್ ಚೌಕ್ ಬಳಿ ಕಾರಿಗೆ ಡಿಕ್ಕಿಯಾಗಿದೆ.
ಪರಿಣಾಮ 6 ಜನ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳದ ವೀಡಿಯೋಗಳನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾದ ಸಂತ್ರಸ್ತರ ರಕ್ತಸಿಕ್ತ ದೇಹಗಳು ವೀಡಿಯೋದಲ್ಲಿ ದಾಖಲಾಗಿವೆ. ಸಂತ್ರಸ್ತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸಂತ್ರಸ್ತರ ಗುರುತು ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.