ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆ ಝಿಕಾ ವೈರಸ್ ಆತಂಕ ಮನೆ ಮಾಡಿದೆ.
ಸಿಲಿಕಾನ್ ಸಿಟಿ ವೈರಸ್ಗಳ ಹಬ್ ಆಗ್ತಿದ್ದು ಜನರಲ್ಲಿ ಸಾಂಕ್ರಾಮಿಕ ರೋಗಗಳ ಜೊತೆ ಜ್ವರದ ಪ್ರಕರಣ ಹೆಚ್ಚಾಗಿದೆ. ರಾಜಧಾನಿಯಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು ಇದರ ಜೊತೆ ಝಿಕಾ ಸೇರಿದಂತೆ ಸಾಂಕ್ರಾಮಿಕ ಖಾಯಿಲೆಗಳ ಆತಂಕ ಹೆಚ್ಚಾಗಿದೆ. ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿ ಪ್ರಕರಣಗಳು ಹೆಚ್ಚಾಗಿವೆ. ಬದಲಾದ ವಾತಾವರಣ ಹಿನ್ನಲೆ ಡೆಂಘಿ, ಟೈಫಾಯ್ಡ್, ವೈರಲ್ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆ ರಾಜ್ಯದಲ್ಲಿ ಝಿಕಾ ಹಾಗೂ ಮೆದಳು ತಿನ್ನುವ ಅಮೀಬಾ ವೈರಸ್ ಆತಂಕವು ಹೆಚ್ಚಾಗಿದ್ದು ಸರ್ಕಾರಿ ಆಸ್ಪತ್ರೆಗಳು ಹೈ ಅಲರ್ಟ್ ಆಗಿವೆ.
ಡೆಂಘಿ ಹಾಗೂ ಝಿಕಾ ವೈರಸ್ ಎರಡು ರೋಗ ಲಕ್ಷಣಗಳಲ್ಲೂ ಸಾಮ್ಯತೆ ಇದ್ದು ವೈದ್ಯರು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ. ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಮತ್ತಿತರ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ್ಯವಹಿಸದಂತೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಸೋಂಕು ಪೀಡಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಇನ್ನು ಕೆಲವು ರೋಗಿಗಳಿಗೆ ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪದಲ್ಲಿದ್ದು, 2-7 ದಿನಗಳ ವರೆಗೆ ಕಂಡು ಬರ್ತಿದೆ. ಹೀಗಾಗಿ ವೈದ್ಯರು ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಜ್ವರ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯಲು ಎಚ್ಚರಿಕೆ ನೀಡಿದ್ದಾರೆ.
ಇನ್ನು ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರತ್ತಿದೆ. ಈ ಡೆಂಘಿಗೆ ಕಡಿವಾಣ ಹಾಕಲು ಡೆಂಘಿ ವ್ಯಾಕ್ಸಿನ್ ಗಾಗಿ ವೈದ್ಯರಿಂದ ಬೇಡಿಕೆ ಕೇಳಿ ಬಂದಿದೆ. ಆದರೆ ಈ ಡೆಂಘಿ ವ್ಯಾಕ್ಸಿನ್ ಭಾರತದಲ್ಲಿಲ್ಲ. ಆದರೆ ಅಮೇರಿಕಾ, ಬ್ರೇಜಿಲ್, ಮೆಕ್ಸಿಕೋ, ಥೈಲ್ಯಾಂಡ್ , ಫಿಲಿಫಿನ್ಸ್ ನಲ್ಲಿ ಡೆಂಗ್ಯೂ ವ್ಯಾಕ್ಸಿನ್ ಗಳು ಯಶಸ್ವಿಯಾಗಿವೆ.