ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮುಂದುವರೆದ ಧಾರಾಕಾರ ಮಳೆಗೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜೀವ ಕಳೆ ಬಂದಿದೆ. ಭಾನುವಾರ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ವೀಕ್ಷಿಸಿದ್ದಾರೆ. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತದ ವೈಭವಕ್ಕೆ ಮನಸೋತಿದ್ದಾರೆ.
ಜೋಗದ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಜಲಪಾತಗಳು ಮೈದುಂಬಿಕೊಂಡಿವೆ. ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಸಾವಿರಾರು ಜನರು ಕಣ್ತುಂಬಿಕೊಂಡು, ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಫೋಟೊ ಸೆರೆ ಹಿಡಿದರು. ಆಗಾಗ ದಟ್ಟವಾಗಿ ಕವಿಯುತ್ತಿದ್ದ ಮಂಜಿನ ನಡುವೆ ಜಲಪಾತ ವೀಕ್ಷಿಸುವುದು ಪ್ರವಾಸಿಗರಿಗೆ ಖುಷಿ ನೀಡಿತು.