ಮಹೇಂದ್ರ ಸಿಂಗ್ ಧೋನಿ… ಭಾರತೀಯ ಕ್ರಿಕೆಟ್ ಲೋಕಕ್ಕೆ ಹೊಸ ಆಯಾಮ ನೀಡಿದ ಆಟಗಾರ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ಕೂಲ್ ಕ್ಯಾಪ್ಟನ್. ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವಿ ಕಪ್ತಾನ ಎಂಎಸ್ ಧೋನಿ 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ.
ಈ ಮಧ್ಯೆ ಆಂಧ್ರಪ್ರದೇಶದ ನಂದಿಗ್ರಾಮದ ತೆಲುಗು ಅಭಿಮಾನಿಗಳು ಈ ಬಾರಿ ಧೋನಿಯ 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಲು ತಯಾರಿ ನಡೆಸಿದ್ದಾರೆ. ಕಳೆದ ಬಾರಿ 77 ಅಡಿ ಕಟೌಟ್ ನಿಲ್ಲಿಸಿದ್ದ ಅಭಿಮಾನಿಗಳು ಈ ಬಾರಿ 100 ಅಡಿ ಕಟೌಟ್ ನಿಲ್ಲಿಸುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದಾರೆ.
ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್ ಪ್ಲ್ಯಾಶ್ ಲೈಟ್ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು. ಧೋನಿ ಎಂದರೆ ಅಭಿಮಾನಿಗಳಿಗೆ ಕ್ರೇಜ್. ಇದೀಗ ಧೋನಿ ಅವರು 43 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಅಭಿಮಾನಿಗಳು ಚೆನ್ನೈ ಸೇರಿ ವಿವಿದೆಡೆ ದೊಡ್ಡ ಕಟೌಟ್ ನಿರ್ಮಿಸಿ ನೆಚ್ಚಿನ ಆಟಗಾರನಿಗೆ ಹರಸಿ ಹಾರೈಸಿದ್ದಾರೆ.