ಪಟ್ನಾ: ಬಿಹಾರದಲ್ಲಿ ಸೇತುವೆ ಕುಸಿತದ ಸರಣಿ ಮುಂದುವರಿದಿದೆ. ಕಳೆದ 17 ದಿನಗಳಲ್ಲಿ ಕನಿಷ್ಠ 12 ಸೇತುವೆಗಳು ನೀರು ಪಾಲಾಗಿವೆ. ಸರಣ್ ಜಿಲ್ಲೆಯಲ್ಲಿ ಗುರುವಾರ ಇತ್ತೀಚಿನ ಸೇತುವೆ ಕುಸಿತದ ಘಟನೆ ವರದಿಯಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಸರನ್ ಜಿಲ್ಲೆಯೊಂದರಲ್ಲಿಯೇ ಕುಸಿದ ಮೂರನೇ ಸೇತುವೆ ಇದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ತಿಳಿಸಿದ್ದಾರೆ.
ಗಂಡಕಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 15 ವರ್ಷದ ಸೇತುವೆಯ ಒಂದು ಭಾಗ ನೀರು ಪಾಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು- ನೋವು ವರದಿಯಾಗಿಲ್ಲ. ಈ ಸೇತುವೆಯು ನೆರೆಯ ಸಿವಾನ್ ಜಿಲ್ಲೆಯೊಂದಿಗೆ ಸರನ್ ಜಿಲ್ಲೆಯ ಕೆಲವು ಹಳ್ಳಿಗಳನ್ನು ಸಂಪರ್ಕಿಸಲು ನೆರವಾಗಿತ್ತು. ಈ ಸೇತುವೆ ಕುಸಿತದ ಘಟನೆಗೆ ಕಾರಣ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ವ್ಯಾಪಕ ಹೂಳು ತೆಗೆಯುವ ಕಾರ್ಯ ನಡೆದಿದ್ದು, ಇದು ಕೂಡ ಕಾರಣಗಳಲ್ಲಿ ಒಂದು ಇರಬಹುದು ಎನ್ನಲಾಗಿದೆ.
ರಾತ್ರಿ 9 ಗಂಟೆಯ ನಂತ್ರ ಊಟ ಮಾಡ್ತೀರಾ..? ಹಾಗಿದ್ರೆ ಈ ಎಲ್ಲಾ ಸಮಸ್ಯೆಗಳು ಎದುರಾಗುವುದು ಗ್ಯಾರಂಟಿ
ಸರನ್ ಜಿಲ್ಲೆಯಲ್ಲಿ ಕುಸಿದ ಮೂರು ಸೇತುವೆಗಳಲ್ಲಿ ಎರಡು ಸೇತುವೆಗಳು ಗಂಡಕಿ ನದಿಗೆ ನಿರ್ಮಿಸಲಾಗಿದ್ದವು. ಕೆಲವೇ ಕಿಮೀ ಅಂತರದಲ್ಲಿರುವ ಎರಡು ಸೇತುವೆಗಳು ಬುಧವಾರ ಎರಡು ಗಂಟೆಗೂ ಕಡಿಮೆ ಅವಧಿಯ ಅಂತರದಲ್ಲಿ ನೀರು ಪಾಲಾಗಿವೆ. ಒಂದು ಸೇತುವೆ ಬ್ರಿಟಿಷರ ಕಾಲದ ಹಾಗೂ ಬಹಳ ಹಳೆಯ ಸೇತುವೆಯಾಗಿದೆ. ಇನ್ನೊಂದನ್ನು 2004ರಲ್ಲಿ ದೋದ್ ನಾಥ ದೇವಸ್ಥಾನದ ಸಮೀಪ ನಿರ್ಮಿಸಲಾಗಿತ್ತು. ಈ ಎರಡು ಘಟನೆಗಳು ನಡೆದ ಬಳಿಕ ಗಂಡಕಿ ಮೇಲೆ ನಿರ್ಮಿಸಿದ 15 ವರ್ಷದ ಹಳೆಯ ಮೂರನೇ ಸೇತುವೆ ಕುಸಿದ ಪ್ರಕರಣ ವರದಿಯಾಗಿದೆ.