ಸೆಲೆಬ್ರಿಟಿಗಳ ಬರ್ತ್ಡೇ ಬಂತು ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಆದರೆ ಕಳೆದ ಕೆಲವು ವರ್ಷಗಳಿಂದ ಕೆಲ ಸ್ಟಾರ್ ನಟರುಗಳು ತಮ್ಮ ಬರ್ತಡೇಯನ್ನು ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ತಿಳಿಸಿದ್ದಾರೆ.
‘ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ’ ಎಂದು ಬರೆದುಕೊಂಡಿದ್ದಾರೆ.
ಮೊದಲು ನಿರೂಪಕರಾಗಿ ಗುರುತಿಸಿಕೊಂಡಿದ್ದ ಗಣೇಶ್ ಆ ಬಳಿಕ ಮುಂಗಾರುಮಳೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಈ ಸಿನಿಮಾದ ಗಣೇಶ್ ಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾದರು. ವೃತ್ತಿ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಗಣೇಶ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಹೀಗಾಗಿ ಈ ವರ್ಷ ಗಣೇಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದು ಕೊಂಡಿದ್ದ ಅಭಿಮಾನಿಗಳಿಗೆ ಗಣೇಶ್ ಪೋಸ್ಟ್ ಬೇಸರ ಮೂಡಿಸಿದೆ.