ಬೆಂಗಳೂರು: ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸುತ್ತದೆ. ಲಕ್ಷಾಂತರ ಜೀವಗಳನ್ನು ಉಳಿಸಲು ದಣಿವರಿಯಿಲ್ಲದೆ ದುಡಿಯುವ ವೈದ್ಯಕೀಯ ಸಿಬ್ಬಂದಿಯ ಶ್ರಮವನ್ನು ಗುರುತಿಸಲು ಭಾರತವು ಈ ದಿನವನ್ನು ಆಚರಿಸುತ್ತದೆ. “ವೈದ್ಯೋ ನಾರಾಯಣೋ ಹರಿಃ ” ಅನ್ನುವ ಮಾತಿದೆ. ಇದರಂತೆ ವೈದ್ಯರನ್ನು ದೇವರು ಎಂದು ಭಾವಿಸುವ ನಾಡು ನಮ್ಮದು. ವೈದ್ಯರ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವನ್ನು ಮೆಚ್ಚಿ ಭಾರತೀಯ ವೈದ್ಯಕೀಯ ಸಂಘ ವೈದ್ಯರ ದಿನವನ್ನು ಆಚರಿಸುತ್ತದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಈ ಸಮಯದಲ್ಲಿಯೂ ಸಹ, ಅವರು ಇತರರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು 24×7 ಕೆಲಸ ಮಾಡಿದರು. ಇದು ಮಾತ್ರವಲ್ಲದೆ ಯಾವಾಗಲೂ ಜನರು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವುದು ವೈದ್ಯರಿಗೆ ಈ ದಿನ ಮೀಸಲು.. ಜಗತ್ತಿನಲ್ಲಿ ಅತ್ಯಂತ ಕ್ಲಿಷ್ಟಕರ ಉದ್ಯೋಗದಲ್ಲಿ ವೈದ್ಯ ವೃತ್ತಿ ಒಂದಾಗಿದ್ದು, ಉದಾತ್ತ ಹುದ್ದೆಗಳಲ್ಲಿ ಒಂದಾಗಿದೆ. ಸ್ವಾಸ್ಥ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಹಗಲಿರುಳು ಜನರ ಸೇವೆ ಸಿದ್ದವಾಗಿರುವ ಇಂತಹ ವೈದ್ಯರ ಸೇವೆ ಪ್ರಶಂಸೆ ಮಾಡಲು ಒಂದು ದಿನ ಸಾಕಾಗುವುದಿಲ್ಲ.
ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ
ವೈದ್ಯರ ದಿನವನ್ನು ಭಾರತದಲ್ಲಿ 1991 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು. ಬಿಧನ್ ಚಂದ್ರ ರಾಯ್ ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು. ಈ ಹಿನ್ನಲೆಯಲ್ಲಿ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು.
ವೈದ್ಯರ ದಿನ ಆಚರಣೆ ಮೂಲಕ ವಿಶೇಷ ಗೌರವ
ಪ್ರತಿ ವರ್ಷ ಭಾರತೀಯ ವೈದ್ಯಕೀಯ ಸಂಘವು, ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಯೋಜಿಸುತ್ತಿದ್ದು, ಈ ಮೂಲಕ ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಭಾರತದಲ್ಲಿ ಮಾತ್ರ ವೈದ್ಯರ ದಿನ ಆಚರಿಸಲಾಗುತ್ತಿಲ್ಲ. ಬದಲಿಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ, ಬೇರೆ ಬೇರೆ ದಿನಾಂಕದಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರಿತಿ ಅಮೆರಿಕಾದಲ್ಲಿ ಮಾರ್ಚ್ 30 ರಂದು,
ಕ್ಯೂಬಾದಲ್ಲಿ ಡಿಸೆಂಬರ್ 3ರಂದು, ಇರಾನ್ನಲ್ಲಿ ಆಗಸ್ಟ್ 23ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಅಮೆರಿಕಾದಲ್ಲಿ 1933 ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ, ಸಲ್ಲಿಸಿದ ವೈದ್ಯರುಗಳಿಗೆ ಕಾರ್ಡ್ ಕಳಿಸುವ ಮೂಲಕ ಹಾಗೂ ನಿಧನರಾದ ವೈದ್ಯರುಗಳ ಸಮಾಧಿಗೆ ಪುಪ್ಪಾರ್ಪಣೆ ಮಾಡುವ ಮೂಲಕ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಗಿತ್ತು.
ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಪ್ರತಿ ವರ್ಷ, ಜುಲೈ 1 ಅನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತವು ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಏಕೆ ಆಚರಿಸುತ್ತದೆ?
ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವು ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿ ಸಿ ರಾಯ್ ಅವರ ಕೊಡುಗೆಯನ್ನು ಗುರುತಿಸುತ್ತದೆ. ಜುಲೈ 1 ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವ.
ವಿಶ್ವ ವೈದ್ಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ವಿಶ್ವಾದ್ಯಂತ ಮಾರ್ಚ್ 30 ರಂದು ವೈದ್ಯರ ದಿನವನ್ನು ಆಚರಿಸಲಾಗುತ್ತದೆ.
ವಿಶ್ವದ ವಿವಿಧೆಡೆ ಜನಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಪರಿಶ್ರಮವನ್ನೂ ಈ ದಿನದಂದು ಗೌರವಿಸಲಾಗುತ್ತದೆ. ನಮ್ಮ ಸಮಾಜದಲ್ಲಿ ವೈದ್ಯರು ಅತಿಮುಖ್ಯ ಪಾತ್ರ ನಿರ್ವಹಿಸುತ್ತಾರೆ. ರೋಗಿಗಳನ್ನು ಗುಣಪಡಿಸಲು ತಮ್ಮ ಬದುಕನ್ನೇ ಮುಡಿಪಾಗಿ ಇಡುವ ಬಹುತೇಕ ವೈದ್ಯರು ಸಮಾಜಕ್ಕಾಗಿ ಖಾಸಗಿ ಸುಖ-ಸಂತೋಷಗಳನ್ನು ತ್ಯಾಗ ಮಾಡುತ್ತಾರೆ. ಭಾರತದ, ಕರ್ನಾಟಕದ ಎಲ್ಲ ಸಹೃದಯ ವೈದ್ಯರಿಗೆ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.