ಬೆಂಗಳೂರು:- ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್ಗೆ ವಹಿಸಲಾಗಿದ್ದು, ಕರ್ನಾಟಕಕ್ಕೆ ತಮಿಳುನಾಡು ಟಕ್ಕರ್ ಕೊಟ್ಟಿದೆ.
ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದ ತಮಿಳುನಾಡು ಸರ್ಕಾರ ಇದೀಗ ಅದರ ಹೊಣೆಯನ್ನು ಬಿಐಎಎಲ್ಗೆ ವಹಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲ್ಯಾನ್ ಮಾಡಿದೆ.
ಕೆಂಪೇಗೌಡ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬಿಐಎಎಲ್ಗೆ ಜವಾಬ್ದಾರಿ ನೀಡಲು ಮಾತುಕತೆ ನಡೆದಿದೆ. ಕೆಂಪೇಗೌಡ ನಿಲ್ದಾಣಕ್ಕೆ 25 ವರ್ಷ ತುಂಬುವವರೆಗೆ 150 ಕಿಮೀ ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ಒಪ್ಪಂದವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಮಾಡಿಕೊಂಡಿತ್ತು. ಬಿಐಎಎಲ್ ಜುಲೈ 5, 2004ರಂದು ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ದೃಷ್ಟಿಯಿಂದ 2033ರವರೆಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ತಲೆ ಎತ್ತುವಂತಿಲ್ಲ
ಈ ತಡೆಯನ್ನು ಮೀರಲು ಸ್ಟಾಲಿನ್ ಸರ್ಕಾರ ಪ್ಲ್ಯಾನ್ ಹಾಕಿಕೊಂಡಿದೆ. ಈ ಬಗ್ಗೆ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಟಿಡ್ಕೊದ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ಬಿಐಎಎಲ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದಕ್ಕೆ ಬಿಐಎಎಲ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಐಎಎಲ್ಗೆ ಹೊಸೂರು ವಿಮಾನ ನಿಲ್ದಾಣ ಟೆಂಡರ್ ಕೊಟ್ಟರೆ ಈ ಒಪ್ಪಂದ ಅನ್ವಯ ಆಗುವುದಿಲ್ಲ ಹೇಳಲಾಗುತ್ತಿದೆ..