ಮುಂಬೈ:- ಭೂಶಿ ಅಣೆಕಟ್ಟು ತುಂಬಿ ಹರಿದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲಾದ ಘಟನೆ ಮಹಾರಾಷ್ಟ್ರದ ಲೋನಾವಾಲಾದಲ್ಲಿ ಜರುಗಿದೆ.
ಮಧ್ಯಾಹ್ನ 1:30ಕ್ಕೆ ಘಟನೆ ನಡೆದಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.
ಪುಣೆ ಎಸ್ಪಿ ಪಂಕಜ್ ದೇಶ್ಮುಖ್ ಈ ಬಗ್ಗೆ ಮಾಹಿತಿ ನೀಡಿದ್ದು, 2 ಶವಗಳನ್ನು ಹೊರತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಹೇಳಿದ್ದಾರೆ. ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದಿಂದ ಕೆಳಕ್ಕೆ ಬಿದ್ದು ನೀರುಪಾಲಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಜಮೀನಿನಲ್ಲಿ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿತ್ತು.. ಗುಂಡಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ನೀಲಮ್ಮ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಮೃತರು ಎನ್ನಲಾಗಿದೆ.