ಬಾರ್ಬಡೋಸ್ನಲ್ಲಿ ಶನಿವಾರ ನಡೆದ ವಿಶ್ವ ಕಪ್ನ ಫೈನಲ್ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತೀಯ ಪುರುಷರ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಅಲ್ಲದೇ ಎರಡನೇ ಬಾರಿ ಟಿ20 ವಿಶ್ವ ಕಪ್ ಗೆದ್ದುಕೊಂಡಿತು. 2007ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ತಂಡ ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ ಗೆದ್ದುಕೊಂಡಿತ್ತು
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ವಿಜೇತ ತಂಡಕ್ಕೆ 125 ಕೋಟಿ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಭಾರತದ ಅತ್ಯುತ್ತಮ ಸಾಧನೆಗೆ ನೀಡಿದ ಕೊಡುಗೆಗಾಗಿ ಆಟಗಾರರು ಮತ್ತು ಎಲ್ಲಾ ಕೋಚಿಂಗ್ ಸಿಬ್ಬಂದಿಯನ್ನು ಅವರು ಅಭಿನಂದಿಸಿದ್ದಾರೆ.
ಐಸಿಸಿ ಪುರುಷರ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಟೀಮ್ ಇಂಡಿಯಾಕ್ಕೆ 125 ಕೋಟಿ ರೂ.ಗಳ ಬಹುಮಾನದ ಮೊತ್ತವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಜಯ್ ಶಾ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ. “ತಂಡವು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢನಿಶ್ಚಯ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅಸಾಧಾರಣ ಸಾಧನೆಗಾಗಿ ಎಲ್ಲಾ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಅವರು ಬರೆದುಕೊಂಡಿದ್ದಾರೆ.
ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ವಿಶ್ವ ಕಪ್ ಹಾಗೂ 17 ವರ್ಷಗಳ ಬಳಿಕ ದೊರೆತ ಟಿ20 ವಿಶ್ವ ಕಪ್. ಭಾರತ ತಂಡ 2007ರ ಉದ್ಘಾಟನಾ ಆವೃತ್ತಿಯ ಟಿ20 ವಿಶ್ವ ಕಪ್ ಗೆದ್ದಿದ್ದರೆ 2011ರ ಏಕ ದಿನ ವಿಶ್ವ ಕಪ್ ಗೆದ್ದುಕೊಂಡಿತು