ಬಾಗಲಕೋಟೆ:– ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಹುಚ್ಚರ ಸಂತೆಯಾಗಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೆಲೆ ಏರಿಕೆ ಖಂಡಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಜುಲೈ 3 ಅಥವಾ 4ರಂದು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಒಂದು ರೀತಿಯ ಹುಚ್ಚರ ಸಂತೆಯಾಗಿದೆ. ಮೊನ್ನೆಯಷ್ಟೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದರು. ಈಗ ಹಾಲಿನ ದರ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದ್ದಾರೆ. ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು
ಕಾಂಗ್ರೆಸ್ ತುಘಲಕ್ ರೀತಿ ಸರ್ಕಾರವನ್ನು ನಡೆಸುತ್ತಿದೆ. ಈ ತಿಂಗಳು, ಮುಂದಿನ ತಿಂಗಳು ಸರ್ಕಾರದ ಬಳಿ ಹಣವೇ ಖಾಲಿಯಾಗಲಿದೆ. ಇದೇ ವೇಳೆ ವೇತನ ಪರಿಷ್ಕರಣೆ ಕೂಡ ಕ್ಯಾಬಿನೆಟ್ ಬಳಿ ಬಂದಿದೆ. ಐದಲ್ಲ ಐವತ್ತು ಗ್ಯಾರಂಟಿ ಕೊಡಿ, ಆದರೆ ವೈಜ್ಞಾನಿಕವಾಗಿ ಮಾಡಿ. ಚುನಾವಣೆಯಲ್ಲಿ ಜನ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಜನ ಇಷ್ಟು ಛೀಮಾರಿ ಹಾಕಿದ್ರೂ ನಿಮಗೆ ನಾಚಿಗೆ ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಯಾವುದೇ ಮುಂದಾಲೋಚನೆ ಇಲ್ಲದೆ ಅವೈಜ್ಞಾನಿಕವಾಗಿ ಗ್ಯಾರಂಟಿ ಜಾರಿಗೆ ತಂದು ಈಗ ಗ್ಯಾರಂಟಿಗೆ ಹಣ ಹೊಂದಿಸಲು ಆಗದೇ ಬೆಲೆ ಏರಿಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಒಂದು ರೂಪಾಯಿ ಜಾಸ್ತಿ ಮಾಡಿದಾಗ ಹೆಣದ ಮೆರವಣಿಗೆ ಮಾಡಿದ್ರಿ. ಸರ್ಕಾರ ದೀವಾಳಿಯಾಗಿದೆ, ಹಣ ಇಲ್ಲ. ಪಾಪಾರ್ ಆಗಿದೆ. ಸಂಬಳ ಕೊಡಲು ಹಣವಿಲ್ಲ ಎಂದು ಆರೋಪಿಸಿ ಆಕ್ರೋಶ ಹೊರ ಹಾಕಿದರು.