ದಾಖಲೆಗಳಿಗಾಗಿ ಬ್ಯಾಟಿಂಗ್ ಮಾಡುವುದಿಲ್ಲ ಎಂದು ಕಾಮೆಂಟೇಟರ್ ಹರ್ಷ ಭೋಗ್ಲೆ ಅವರಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಖಡಕ್ ಉತ್ತರ ಕೊಟ್ಟಿದ್ದಾರೆ. ಇಲ್ಲಿನ ರಡೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ 24 ರನ್ಗಳ ಭರ್ಜರಿ ಜಯ ದಾಖಲಿಸಿತು. ನಾಯಕ ರೋಹಿತ್ ಶರ್ಮಾ ಕೇವಲ 8 ರನ್ಗಳ ಅಂತರದಲ್ಲಿ ಶತಕ ವಂಚಿತರಾದರೂ ತಂಡಕ್ಕೆ ಮಹತ್ವದ ಪಂದ್ಯ ಗೆದ್ದುಕೊಡಲು ಪ್ರಚಂಡ ಬ್ಯಾಟಿಂಗ್ ನಡೆಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತ್ತಾದ ಭಾರತ ತಂಡಕ್ಕೆ ಆರಂಭದಲ್ಲಿ ಮಳೆ ಕಾಟ ಕೊಟ್ಟಿತು. ಮಳೆ ನಿಂತ ಬಳಿಕ ತಮ್ಮ ಅಬ್ಬರದ ಆಟ ಮುಂದುವರಿಸಿದ ಹಿಟ್ಮ್ಯಾನ್ ಖ್ಯಾತಿಯ ಆರಂಭಿಕ ಬ್ಯಾಟರ್ ಆಸ್ಟ್ರೇಲಿಯಾದ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಕ್ರೀಡಾಂಗಣದ ಮೂಲೆ ಮೂಲೆಗಳಿಗೆ ಫೋರ್-ಸಿಕ್ಸರ್ಗಳ ಸುರಿಮಳೆಗೈದರು. ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಟೇಕರ್ ಮಿಚೆಲ್ ಸ್ಟಾರ್ಕ್ ಎದುರು ಓವರ್ ಒಂದರಲ್ಲೇ 4 ಸಿಕ್ಸರ್ ಸಿಡಿಸಿ ಎದುರಾಳಿಯ ಎದೆ ನಡುಗುವಂತೆ ಮಾಡಿದ್ದರು.
Heart Attack Symptoms: ಎಚ್ಚರ! ಈ ಲಕ್ಷಣಗಳು ಹಾರ್ಟ್ ಅಟ್ಯಾಕ್’ನ ಸೂಚನೆ ಇರಬಹುದು..!
ಇನಿಂಗ್ಸ್ ಆರಂಭದಿಂದಲೂ ಹೊಡಿ ಬಡಿ ಆಟವಾಡಿದ ರೋಹಿತ್ ಶರ್ಮಾ ವೃತ್ತಿಬದುಕಿನ 6ನೇ ಟಿ20-ಐ ಶತಕ ಬಾರಿಸುವ ಅತ್ಯುತ್ತಮ ಅವಕಾಶವಿತ್ತು. 41 ಎಸೆತಗಳನ್ನು ಎದುರಿಸಿದ ಹಿಟ್ಮ್ಯಾನ್ 7 ಫೋರ್ ಮತ್ತು ಬರೋಬ್ಬರಿ 8 ಸಿಕ್ಸರ್ ಸಿಡಿಸುವ ಮೂಲಕ 92 ರನ್ ಬಾರಿಸಿ ನಿರ್ಗಮಿಸಿದರೆ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಫುಲ್ ಎಸೆತದಲ್ಲಿ ಇನ್ಸೈಡ್ ಎಡ್ಜ್ನೊಂದಿಗೆ ಬೌಲ್ಟ್ಔಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು. ಆದರೆ, ಔಟ್ ಆಗುವ ಮುನ್ನ ಆಸ್ಟ್ರೇಲಿಯಾದ ಸೋಲಿಗೆ ಹಿಟ್ಮ್ಯಾನ್ ಖೆಡ್ಡ ತೋಡಿದ್ದರು. ರೋಹಿತ್ ಅಬ್ಬರದ ಪರಿಣಾಮ ಭಾರತ ತಂಡ 20 ಓವರ್ಗಳಲ್ಲಿ 205/5 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾಗೆ ಸಹಜವಾಗಿಯೇ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಈ ಮೂಲಕ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಪಂದ್ಯ ಶ್ರೇಷ್ಠ ಗೌರವ ಪಡೆದ ಟೀಮ್ ಇಂಡಿಯಾದ ಮೊತ್ತ ಮೊದಲ ನಾಯಕ ಎಂಬ ವಿಶೇಷ ದಾಖಲೆಯನ್ನೂ ರೋಹಿತ್ ನಿರ್ಮಿಸಿದರು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಕಾಮೆಂಟೇಟರರ್ ಹರ್ಷ ಭೋಗ್ಲೆ, 92 ರನ್ ಗಳಿಸಿದ್ದಾಗ ಶತಕದ ಬಗ್ಗೆ ಆಲೋಚನೆ ಬಂದಿತ್ತೆ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಖಡಕ್ ಉತ್ತರ ಕೊಟ್ಟ ರೋಹಿತ್, ದಾಖಲೆಗಳಿಗಾಗಿ ಆಡುವುದಿಲ್ಲ ಎಂದರು.
“ಕಳೆದ ಪಂದ್ಯದಲ್ಲೇ ನಾನು ಈ ಬಗ್ಗೆ ಹೇಳಿದ್ದೆ. ನನಗೆ ಅರ್ಧಶತಕಗಳು ಮತ್ತು ಶತಕಗಳು ಮುಖ್ಯವಲ್ಲ. ಗಮನ ಏನಿದ್ದರೂ ಪಂದ್ಯಗಳನ್ನು ಗೆಲ್ಲುವ ಕಡೆಗಷ್ಟೆ. ದೀರ್ಘ ಸಮಯದಿಂದಲೇ ನಾನು ಈ ಮಾದರಿಯ, ಇದೇ ಮನಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುತ್ತಾ ಬಂದಿದ್ದೇನೆ. ಪರಿಸ್ಥಿತಿಗೆ ಹೊಂದಿಕೊಂಡು ಅಗತ್ಯತೆಗೆ ತಕ್ಕಂತೆ ಬ್ಯಾಟ್ ಮಾಡಬೇಕು. ಸ್ಪೋಟಕ ಬ್ಯಾಟಿಂಗ್ ಮಾಡಿ ಎದುರಾಳಿ ಬೌಲರ್ಗಳ ಆತ್ಮವಿಶ್ವಾಸ ಅಡಗಿಸಬೇಕು. ಇದಷ್ಟೇ ನನ್ನ ಗುರಿ. ಸ್ಪೋಟಕ ಬ್ಯಾಟಿಂಗ್ ನಡೆಸಿ ಸಾಧ್ಯವಾದಷ್ಟು ಹೆಚ್ಚು ಸಮಯ ಕ್ರೀಸ್ನಲ್ಲಿ ಉಳಿಯುವ ಪ್ರಯತ್ನ ಮಾಡುತ್ತೇನೆ. ಆಗ ದೊಡ್ಡ ಸ್ಕೋರ್ಗಳು ತನ್ತಾನೆ ಬರುತ್ತವೆ,” ಎಂದು ಹಿಟ್ ಮ್ಯಾನ್ ಹೇಳಿದ್ದಾರೆ.