ನಾನ್ ವೆಜ್ ಪ್ರಿಯರ ಫೇವರೆಟ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ 7 ವರ್ಷಗಳವರೆಗೆ ಗರಿಷ್ಠ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ರಾಜ್ಯಾದ್ಯಂತ 39 ಕಬಾಬ್ ಮಾದರಿಯನ್ನು ಸಂಗ್ರಹಿಸಿ, ಕ್ವಾಲಿಟಿ ಚೆಕ್ ಮಾಡಿ 8 ಕಬಾಬ್ ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದನ್ನು ಪತ್ತೆ ಮಾಡಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಸನ್ಸೆಟ್ ಯೆಲ್ಲೋ, ಕಾರ್ಮೋಸಕಿನ್ನಂತಹ ರಾಸಯನಿಕ ಅಂಶ ಇರುವುದು ಪತ್ತೆಯಾಗಿತ್ತು. ಈ ಎರಡು ಅಂಶಗಳಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆ ಎಂಬುದು ಬಯಲಾಗಿದೆ. ಈ ಹಿನ್ನೆಲಯ್ಲಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇತ್ತೀಚೆಗೆ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿತ್ತು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕೃತಕ ಬಣ್ಣಗಳು ಕಾರಣ ಎಂದು ತಿಳಿಸಿದ್ದರು. ಇದೀಗ ಕಬಾಬ್ ಗೂ ಕಲರ್ ನಿಷೇಧ ಮಾಡಲಾಗಿದೆ.