ದೆಹಲಿ:- ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ವಕೀಲರ ಮೂಲಕ ಜಾಮೀನು ಕೋರಿ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದಾರೆ. ನಾಳೆ ಅರ್ಜಿ ವಿಚಾರಣೆ ಸಾಧ್ಯತೆ ಇದೆ. ಇತ್ತೀಚೆಗೆ ರೋಸ್ ಅವೆನ್ಯೂ ನ್ಯಾಯಾಲಯ ಕೇಜ್ರಿವಾಲ್ಗೆ ಜಾಮೀನು ನೀಡಿತ್ತು. ಆದರೆ ರೋಸ್ ಅವೆನ್ಯೂ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಕೇಜ್ರಿವಾಲ್ ಪರ ವಕೀಲರು ಸೋಮವಾರ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ದೆಹಲಿ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ಗೆ ಜಾಮೀನು ನೀಡಲಾಗಿತ್ತು. ಆದರೆ ಅವರ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ಆದೇಶ ನೀಡುವವರೆಗೆ ಜಾಮೀನಿಗೆ ತಡೆ ನೀಡಿತ್ತು.
ಶುಕ್ರವಾರ ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಇಡಿ ಪರ ವಾದ ಮಂಡಿಸಿದ ಜನರಲ್ ಎಸ್ವಿ ರಾಜು, ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ‘ಲೋಪ್ಸೈಡ್’ ಮತ್ತು ‘ಏಕಪಕ್ಷೀಯ’ ಎಂದು ಬಣ್ಣಿಸಿದ್ದಾರೆ. ‘ದಾಖಲೆಗಳನ್ನು ಪರಿಗಣಿಸದೆಯೇ ನಿರ್ಧಾರ ಕೈಗೊಳ್ಳಲಾಗಿದೆ, ದಾಖಲೆಗಳನ್ನು ಪರಿಗಣಿಸದೆ ಅವು ಸಂಬಂಧಿತ ಅಥವಾ ಅಪ್ರಸ್ತುತ ಎಂದು ಹೇಗೆ ತೀರ್ಮಾನಿಸುತ್ತೀರಿ’ ಎಂದು ವಾದಿಸಿದ್ದರು.