ತೂಕ ಇಳಿಕೆಯ ಪ್ರಕ್ರಿಯಲ್ಲಿ ಶಿಸ್ತುಬದ್ಧ ಆಹಾರಕ್ರಮ ಮತ್ತು ಜೀವನಶೈಲಿಯನ್ನುಅಳವಡಿಸಿಕೊಳ್ಳುವುದು ಹಾಗೂ ಮತ್ತು ದೀರ್ಘಾವಧಿಯಲ್ಲಿ ಅದನ್ನು ಕಾಪಾಡಿಕೊಳ್ಳಲು ಅಗತ್ಯವಾದ ಮಾರ್ಗವಾಗಿದೆ. ಕೆಲವು ಆಹಾರಗಳು ಮತ್ತು ಜೀವನಕ್ರಮದ ಬದಲಾವಣೆಗಳು ಈ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ತೂಕ ಇಳಿಕೆಯ ವೇಗವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಗುಣಗಳಿರುವ ಆಹಾರಗಳಿಗೆ ಎರಡು ಉದಾಹರಣೆಗಳೆಂದರೆ ಮೀನು ಮತ್ತು ಕೋಳಿ. ಅದಕ್ಕಾಗಿಯೇ ಜನರು ಇತರ ರೂಪಾಂತರಗಳಿಗಿಂತ ಬೇಯಿಸಿದ ಕೋಳಿಮಾಂಸ ಅಥವಾ ಬೇಯಿಸಿದ ಮೀನುಗಳನ್ನೇ ಆರಿಸುವುದನ್ನು ನೀವು ಹೆಚ್ಚಾಗಿ ಗಮನಿಸಬಹುದು.
ಗ್ರಿಲ್ ಮಾಡಿದ ಮಾಂಸವೇ ತೂಕ ಇಳಿಕೆಗೆ ಒಳ್ಳೆಯದು
ಹುರಿಯುವಾಗ ಮಾಂಸದಲ್ಲಿರುವ ಕೊಬ್ಬು ಹಾಗೇ ಉಳಿದುಕೊಳ್ಳುವ ಜೊತೆಗೇ ಹುರಿಯಲು ಬಳಸಿದ ಎಣ್ಣೆಯನ್ನೂ ಹೀರಿಕೊಳ್ಳುತ್ತದೆ. ಆದರೆ ಗ್ರಿಲ್ ನಲ್ಲಿ ಮಾಂಸದ ಒಳಗಿನ ಕೊಬ್ಬಿನ ಅಂಶ ಕರಗಿ ಹೊರಬಂದು ತೊಟ್ಟಿಕ್ಕಿ ಮಾಂಸದಿಂದ ನಿವಾರಿಸಲ್ಪಡುವ ಮೂಲಕ ಹುರಿದ ಮಾಂಸಕ್ಕಿಂತಲೂ ಗ್ರಿಲ್ ಮಾಡಿದ ಮಾಂಸವೇ ಹೆಚ್ಚು ಆರೋಗ್ಯಕರವಾಗಿದೆ. ಅಷ್ಟೇ ಅಲ್ಲ, ಇದನ್ನು ತಯಾರಿಸಲು ಕಡಿಮೆ ಎಣ್ಣೆ ಅಥವಾ ಬೆಣ್ಣೆ ಸಾಕಾಗುತ್ತದೆ ಮತ್ತು ಪೋಷಕಾಂಶಗಳೂ ನಷ್ಟವಾಗುವುದಿಲ್ಲ. ಸಾಮಾನ್ಯವಾಗಿ ಇವುಗಳಲ್ಲಿ ಕ್ಯಾಲೋರಿಗಳೂ ಕಡಿಮೆ ಇರುತ್ತವೆ ಹಾಗೂ ಇತರ ವಿಧಗಳಲ್ಲಿ ತಯಾರಿಸಿದ ಮಾಂಸಕ್ಕಿಂತಲೂ ಆರೋಗ್ಯಕರವಾಗಿರುತ್ತವೆ.
ಮೀನು ತಿನ್ನುವುದರ ಪ್ರಯೋಜನಗಳು
ಮೀನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳೂ ದೊರೆಯುತ್ತವೆ. ನಮ್ಮ ದೇಹವು ನೈಸರ್ಗಿಕವಾಗಿ ಉತ್ಪಾದಿಸಲು ಸಾಧ್ಯವಾಗದ ಒಮೆಗಾ -3 ಕೊಬ್ಬಿನಾಮ್ಲಗಳು ಮೀನಿನಿಂದ ದೊರಕುವ ಅತಿ ದೊಡ್ಡ ಪ್ರಯೋಜನವಾಗಿದೆ. ಒಮೆಗಾ -3 ಕೊಬ್ಬಿನ ಆಮ್ಲಗಳು ದೇಹದಲ್ಲಿನ ಉರಿಯೂತ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ತೂಕ ಇಳಿಕೆಗೆ ಹೆಚ್ಚಿನ ಬೆಂಬಲ ನೀಡುತ್ತದೆ.
ಪ್ರೋಟೀನ್ ಆಹಾರ ಸಂತೃಪ್ತತೆ ಅಥವಾ ಅಲ್ಪ ಪ್ರಮಾಣ ಸೇವಿಸಿದಾಗ ಹೊಟ್ಟೆಯ ಹಸಿವು ಇಲ್ಲವಾಗಿ ಹೆಚ್ಚಿನ ಆಹಾರದ ಬಯಕೆ ಇಲ್ಲದಂತೆ ಮಾಡುತ್ತದೆ, ಆದರೆ ಇತರ ರೀತಿಯ ಪ್ರೋಟೀನ್ಗಳಿಗೆ ಹೋಲಿಸಿದರೆ ಮೀನುಗಳನ್ನು ತಿನ್ನುವುದು ಜನರು ಹೆಚ್ಚು ಕಾಲ ಹೊಟ್ಟೆ ತುಂಬಿರುವ ಭಾವನೆ ಮೂಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದು ಉತ್ತಮ ರೀತಿಯ ತೆಳ್ಳಗಿನ ಮಾಂಸವಾಗಿದ್ದು, ಇದು ಚಲನವಲನದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಸ್ನಾಯುಗಳನ್ನು ನಿರ್ಮಿಸಲು ಮತ್ತು ದೇಹದಲ್ಲಿ ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲು ಸಹಾ ನೆರವಾಗುತ್ತದೆ.
ಮೀನುಗಳಿಗೆ ಕಡಿಮೆ ಪ್ರೋಟೀನ್ ಮೂಲ
ಆದರೂ, ಇತರ ಮಾಂಸ ಮತ್ತು ಪ್ರಾಣಿ ಉತ್ಪನ್ನಗಳಿಗೆ ಹೋಲಿಸಿದರೆ ಮೀನುಗಳಿಗೆ ಕಡಿಮೆ ಪ್ರೋಟೀನ್ ಮೂಲವಿದೆ ಎಂಬುದನ್ನು ನೆನಪಿಡುವುದು ಅಗತ್ಯ. ಕೆಲವು ವಿಧದ ಮೀನುಗಳು ಹೆಚ್ಚಿನ ಕೊಬ್ಬಿನಂಶವನ್ನು ಹೊಂದಿರಬಹುದು, ಆದ್ದರಿಂದ ನೀವು ಯಾವ ರೀತಿಯ ಮೀನುಗಳನ್ನು ಸೇವಿಸುತ್ತೀರಿ ಎಂಬುದರ ಬಗ್ಗೆಯೂ ಜಾಗರೂಕರಾಗಿರಬೇಕು.
ಸಮುದ್ರಾಹಾರವನ್ನು ಸೇವಿಸುವಾಗ ಮೀನಿನಲ್ಲಿ ಇರಬಹುದಾದ ಮಾಲಿನ್ಯ ಮತ್ತು ಇತರ ಸುರಕ್ಷತೆಯ ಅಪಾಯಗಳನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮೀನುಗಳಲ್ಲಿ ಕಂಡುಬರುವ ಪಾದರಸದ ಕುರುಹುಗಳು ಸೂಕ್ಷ್ಮ ಜೀರ್ಣವ್ಯವಸ್ಥೆಯನ್ನು ಹೊಂದಿರುವವರಿಗೆ ಹಾನಿಕಾರಕವಾಗಿದೆ. ಹಸಿ ಮೀನುಗಳನ್ನು ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ತಿನ್ನುವುದನ್ನು ಆದಷ್ಟೂ ಮಿತಗೊಳಿಸಬೇಕು.
ಗ್ರಿಲ್ ಮಾಡಿದ ಕೋಳಿಮಾಂಸ ತಿನ್ನುವುದರಿಂದ ಪ್ರಯೋಜನಗಳಿವೆಯೇ?
ಈ ಜಗತ್ತಿನಲ್ಲಿ ಅತಿ ಹೆಚ್ಚು ಸೇವಿಸಲ್ಪಡುವ ಮಾಂಸ ಎಂಬ ಮೆಚ್ಚುಗೆ ಪಡೆದಿರುವ ಕೋಳಿಮಾಂಸದ ರುಚಿಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಮಾಂಸಾಹಾರಿಗಳಿಗೆ ಕೋಳಿಮಾಂಸ ಪ್ರಥಮ ಆಯ್ಕೆಯಾಗಿದ್ದು . ಇತರ ಮಾಂಸಗಳಿಗೆ ಹೋಲಿಸಿದರೆ ಇದರ ಬೆಲೆಯೂ ಅಗ್ಗವಾಗಿದ್ದು ಎಲ್ಲರಿಗೂ ಕೈಗೆಟುಕುವಂತಿದೆ, ಇದು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಸುಲಭಗೊಳಿಸುತ್ತದೆ. ಆಹಾರದ ಮೂಲವಾಗಿ ಕೋಳಿಮಾಂಸವನ್ನು ಆಯ್ಕೆ ಮಾಡಿದಾಗ, ಅದರಲ್ಲಿ ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನು ಪಡೆಯುತ್ತೇವೆ. ಅಧಿಕ ಪ್ರೋಟೀನ್ (ಒಂದು ಪ್ರಮಾಣದ ಮಾಂಸದಿಂದ ಸುಮಾರು 27 ಗ್ರಾಂ ಪ್ರೋಟೀನ್ ಲಭಿಸುತ್ತದೆ),
ಕಡಿಮೆ ಕೊಬ್ಬಿನಂಶ ಮತ್ತು ಜೀವಸತ್ವಗಳು ಮತ್ತು ಖನಿಜಗಳು (ಉದಾಹರಣೆಗೆ ವಿ. ಬಿ 6, ಸೆಲೆನಿಯಮ್, ನಿಯಾಸಿನ್ ಮತ್ತು ರಂಜಕ), ಇವೆಲ್ಲವೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ, ದೃಢಕಾಯವನ್ನು ನಿರ್ಮಿಸುತ್ತದೆ. ಕೋಳಿಮಾಂಸವನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ, ಹಸಿವನ್ನು ಕಡಿಮೆ ಮಾಡಬಹುದು ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಬಹುದು. ಕೋಳಿಯ ಎದೆಯಭಾಗದ ಮಾಂಸ ಇತರ ಯಾವುದೇ ಭಾಗದ ಮಾಂಸಕ್ಕಿಂತಲೂ ಹೆಚ್ಚು ಆರೋಗ್ಯಕರವಾಗಿದೆ.
ತೂಕ ಇಳಿಸಿಕೊಳ್ಳಲು ಯಾವುದು ಉತ್ತಮ
ಒಂದು ವೇಳೆ ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಆದ್ಯತೆಯ ಗುರಿಯಾಗಿದ್ದರೆ ಕೋಳಿ ಮಾಂಸ ತಿನ್ನುವುದಕ್ಕಿಂತಲೂ ಮೀನಿನ ಸೇವನೆ ಹೆಚ್ಚು ಆರೋಗ್ಯಕರ ಆಯ್ಕೆಯಾಗಿರಬಹುದು ಎಂದು ಅಧ್ಯಯನಗಳು ದೃಢಪಡಿಸಿವೆ. ಒಂದು ವೇಳೆ, ನೀವು ಆರೋಗ್ಯಕರ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುವವರಾಗಿದ್ದರೆ ಈ ಎರಡೂ ಆಹಾರಗಳನ್ನು ಮಿತಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು. ಉತ್ತಮ ಜೀವನಶೈಲಿಗಾಗಿ, ಕಾರ್ಬೋಹೈಡ್ರೇಟುಗಳು,
ಪ್ರೋಟೀನುಗಳು, ಜೀವಸತ್ವಗಳು ಮತ್ತು ಖನಿಜಗಳ ಸಹಿತ ಎಲ್ಲಾ ಪೋಷಕಾಂಶಗಳ ಅಗತ್ಯತೆಗಳನ್ನು ಸೂಕ್ತ ಆಹಾರದ ಮೂಲಕ ಪೂರೈಸಿಕೊಳ್ಳುವುದುದು ಮುಖ್ಯವಾಗಿದೆ. ತಜ್ಞರ ಪ್ರಕಾರ, ತೂಕ ಇಳಿಕೆಯ ಗತಿಯನ್ನು ಅತಿಯಾಗಿ ವೇಗಗೊಳಿಸಬಾರದು, ಬದಲಿಗೆ ತೂಕ ಇಳಿಕೆ ನಿಧಾನಕ್ರಮದಲ್ಲಿ ಸಾಗುತ್ತಾ ಆರೋಗ್ಯವನ್ನೂ ಕಾಪಾಡಿಕೊಳ್ಳುವ ಜೊತೆಗೇ ಇಳಿದ ತೂಕ ಮತ್ತೆ ಏರದಂತೆಯೂ ಈ ಪ್ರಯತ್ನಗಳನ್ನು ಮುಂದುವರೆಸಬೇಕು. ಹಾಗಾಗಿ, ಸಾಕಷ್ಟು ಸಸ್ಯಾಹಾರ, ಡೈರಿ ಉತ್ಪನ್ನಗಳು, ಬಿಳಿ ಮಾಂಸ ಮೊದಲಾದವುಗಳ ಸಮತೋಲನದ ಆಹಾರಕ್ರಮವೇ ಅತ್ಯುತ್ತಮವಾಗಿದೆ.