ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಂತೆ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗುತ್ತಲೇ ಇದ್ದು, ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಂದ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ದೋಚಿದ್ದ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಾದ ದರ್ಶನ್ ಮತ್ತು ಸಹಚರರನ್ನು ಕೋರ್ಟ್ನಲ್ಲಿ ಹಾಜರುಪಡಿಸಿದ್ದಾಗ ವಾದ ಮಂಡಿಸಿದ್ದ ಪೊಲೀಸ್ ಪರ ವಿಶೇಷ ಅಭಿಯೋಜಕರು, ಆರೋಪಿಗಳು ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ಕೊಟ್ಟು ಕ್ರೌರ್ಯ ಮೆರೆದಿದ್ದರು ಎಂಬ ಭಯಾನಕ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆರೋಪಿಗಳ ತಂಡವು ಇದೀಗ ಅದಕ್ಕಿಂತಲೂ ಹೇಯ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಚಿನ್ನದ ಆಭರಣಗಳನ್ನು ಆತ ದೋಚಿದ್ದ
ರೇಣುಕಾಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತನ ಪೈಶಾಚಿಕ ಕೃತ್ಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ರಾಘವೇಂದ್ರ, ರೇಣುಕಾ ಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆಯ ಶೆಡ್ಗೆ ಎಳೆದೊಯ್ದು ಹಲ್ಲೆ ನಡೆಸಿದ್ದ. ಅಲ್ಲದೆ, ರೇಣುಕಾಸ್ವಾಮಿಯನ್ನು ಕೊಂದ ನಂತರ ಅವರ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ಆತ ದೋಚಿದ್ದ ಎಂದು ಗೊತ್ತಾಗಿದೆ.
Eid Ul Adha 2024: ತ್ಯಾಗದ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬದ ಮಹತ್ವ ಇಲ್ಲಿದೆ ನೋಡಿ..!
ಹಣದಾಸೆಗೆ ರಾಘವೇಂದ್ರ ಶೆಡ್ಗೆ ಮರಳಿ ಬಂದಿದ್ದ
ತೀವ್ರ ಥಳಿತಕ್ಕೊಳಗಾಗಿ ರೇಣುಕಾಸ್ವಾಮಿ ಕೊಲೆಯಾದ ಕೂಡಲೇ ರಾಘವೇಂದ್ರ, ಪಟ್ಟಣಗೆರೆಯ ಶೆಡ್ನಿಂದ ಕಾಲ್ಕಿತ್ತಿದ್ದ. ಬಳಿಕ ಇತರೆ ಆರೋಪಿಗಳು ಆತನಿಗೆ ಕರೆ ಮಾಡಿ 10 ಲಕ್ಷ ರೂ. ಹಣ ಕೊಡುತ್ತೇವೆ ಎಂದು ಹೇಳಿದಾಗ ಹಣದಾಸೆಗೆ ರಾಘವೇಂದ್ರ ಶೆಡ್ಗೆ ಮರಳಿ ಬಂದಿದ್ದ. ರೇಣುಕಾಸ್ವಾಮಿಯ ಶವ ಎಸೆಯಲು ರಾಘವೇಂದ್ರ ಸಹ ಇತರೆ ಆರೋಪಿಗಳ ಜತೆಗೆ ಹೋಗಿದ್ದ. ಶವ ಎಸೆಯುವುದಕ್ಕೂ ಮುನ್ನ ರೇಣುಕಾಸ್ವಾ ಮಿಯ ಮೈ ಮೇಲಿದ್ದ ಚಿನ್ನದ ಆಭರಣಗಳನ್ನು ರಾಘವೇಂದ್ರ ದೋಚಿದ್ದ. ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಕಡಗ ಮತ್ತು ಕೈಗಡಿಯಾರ ತೆಗೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪತ್ನಿಗೆ ಕೊಟ್ಟಿದ್ದ
ಶವ ಎಸೆದ ನಂತರ ರಾಘವೇಂದ್ರ ತನ್ನ ಪತ್ನಿಗೆ ಕರೆ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ. ಬಳಿಕ ಬೆಂಗಳೂರಿನ ಲಾಡ್ಜ್ನಲ್ಲಿ ರೂಂ ಮಾಡಿ, ಪತ್ನಿಯನ್ನು ಅಲ್ಲಿಇರಿಸಿದ್ದ. ರೇಣುಕಾಸ್ವಾಮಿಯ ಶವದ ಮೇಲಿಂದ ದೋಚಿದ್ದ ಆಭರಣಗಳನ್ನು ಪತ್ನಿಗೆ ಕೊಟ್ಟಿದ್ದ. ಆತನ ಪತ್ನಿಯು ಆ ಆಭರಣಗಳನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಿದ್ದಳು. ರಾಘವೇಂದ್ರ ವಿಚಾರಣೆ ವೇಳೆ ಈ ವಿಚಾರ ತಿಳಿಸಿದ್ದು, ಈ ಸುಳಿವು ಆಧರಿಸಿ ಆತನ ಪತ್ನಿಯಿಂದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.