ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಆರೋಪಿಗಳ ಕ್ರೂರ ಮುಖ ಬಯಲಾಗುತ್ತಿದೆ. ಆರಂಭದಲ್ಲಿ ಭಯಪಡಿಸಲು ಹೋಗಿ ಮಾಡಲಾಗಿರುವ ಹತ್ಯೆ ಎನ್ನಲಾಗಿತ್ತು, ಆದರೆ ಪ್ರಕರಣ ಮುಂದುವರೆದಂತೆ ರೇಣುಕಾ ಸ್ವಾಮಿಯನ್ನು ದರ್ಶನ್ ಹಾಗೂ ಗ್ಯಾಂಗ್ ಹೇಗೆಲ್ಲ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಅಂಶಗಳು ಬಹಿರಂಗವಾಗುತ್ತಿವೆ. ರೇಣುಕಾಸ್ವಾಮಿ ಹತ್ಯೆ ಮಾಡುವ ವೇಳೆ ಆರೋಪಿಗಳು ನಡೆದುಕೊಂಡ ರಾಕ್ಷಸ ಕೃತ್ಯ ಒಂದೊಂದಾಗೆ ಬಯಲಾಗುತ್ತಿದೆ.
ದರ್ಶನ್ ಮತ್ತು ಗ್ಯಾಂಗ್ ಅನ್ನು ಮತ್ತೆ ಒಂಬತ್ತು ದಿನಗಳ ಕಾಲ ವಶಕ್ಕೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು, ಈ ಹಂತದಲ್ಲಿ ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರಾಗಿ ನೇಮಕವಾಗಿರುವ ಪ್ರಸನ್ನ ಕುಮಾರ್ ಅವರು ಪೊಲೀಸರ ಪರ ವಾದ ಮಂಡಿಸಿದರು.ಈ ವೇಳೆ ರೇಣುಕಾ ಸ್ವಾಮಿಯನ್ನು ಕೊಲ್ಲುವ ಮುಂಚೆ ಆತನಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ದರ್ಶನ್ ಹಾಗೂ ಗ್ಯಾಂಗ್ನ ಕ್ರೂರತೆಯ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದ ಹಿರಿಯ ವಕೀಲ ಪ್ರಸನ್ನ ಕುಮಾರ್ ಅವರು ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಆ ಕರೆಂಟ್ ಶಾಕ್ ನೀಡಲು ಬಯಸಿದ್ದ ಮೆಗ್ಗರ್ ಯಂತ್ರವನ್ನು ಸಹ ವಶಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ಮೈಸೂರಿನಲ್ಲಿ ಕೆಲವು ಕಡೆ ಆರೋಪಿಯೊಟ್ಟಿಗೆ ಮಹಜರು ಮಾಡಬೇಕಿದೆ. ಆರೋಪಿಯ ಬಟ್ಟೆ ಹಾಗೂ ಚಪ್ಪಲಿಗಳನ್ನು ಸಹ ವಶಪಡಿಸಿಕೊಳ್ಳಬೇಕಿದೆ’ ಎಂದು ಸಹ ವಾದಿಸಿದ್ದಾರೆ.
ಕೆಲವು ಆರೋಪಿಗಳು ರೇಣುಕಾ ಸ್ವಾಮಿ ಕೊಲೆಯಾದ ದಿನ ನಡೆದ ಘಟನೆಗಳನ್ನು ಈಗಾಗಲೇ ವಿವರಿಸಿದ್ದು, ಕೆಲವರು ಅಪ್ರೂವರ್ ಆಗಿ ಸಹ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಹಲ್ಲೆ ಮಾಡಲಾಗಿದೆ, ಕೃಷ ದೇಹಿಯಾಗಿದ್ದ ರೇಣುಕಾ ಸ್ವಾಮಿಯನ್ನು ಎತ್ತಿ ಗೋಡೆಗೆ ಹೊಡೆಯಲಾಗಿದೆ, ಸಿಗರೇಟಿನಿಂದ ದೇಹದ ಮೇಲೆ ಸುಡಲಾಗಿದೆ. ತಲೆಯನ್ನು ಬಲವಾಗಿ ಟ್ಯಾಂಕರ್ ವಾಹನಕ್ಕೆ ಹೊಡೆಯಲಾಗಿದೆ. ಇದೆಲ್ಲದರ ಬಳಿಕ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಅಮಾಯಕ ಕೂಲಿ ಕೆಲಸದವರನ್ನು ಪುಸಲಾಯಿಸಿ ಹತ್ಯೆ ಆರೋಪವನ್ನು ಒಪ್ಪಿಕೊಳ್ಳುವಂತೆ ಹೇಳಿದ್ದರು ಎನ್ನಲಾಗಿದೆ.