ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ನಿಂದ ಗಂಟು ಮೂಟೆ ಕಟ್ಟಿದೆ. ಯುಎಸ್ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಗೆ ಅಹುತಿಯಾಗುವುದರೊಂದಿಗೆ ಪಾಕ್ ತಂಡವು ವಿಶ್ವಕಪ್ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತಿದ್ದ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಮಂಡಿಯೂರಿತ್ತು.
ಇನ್ನು ಮೂರನೇ ಪಂದ್ಯದಲ್ಲಿ ಕೆನಡಾ ವಿರುದ್ಧ ಜಯಗಳಿಸುವ ಮೂಲಕ ಗೆಲುವಿನ ಖಾತೆ ತೆರೆದಿತ್ತು. ಈ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೇರುವ ಆಸೆಯನ್ನು ಜೀವಂತವರಿಸಿಕೊಂಡಿದ್ದ ಪಾಕ್ ಪಡೆಗೆ ವರುಣ ಅಡ್ಡಿಯಾಗಿದ್ದಾನೆ. ಅಂದರೆ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ತಂಡ ಗೆದ್ದಿದ್ದರೆ, ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೂಪರ್-8 ಹಂತಕ್ಕೇರುವ ಅವಕಾಶ ಹೊಂದಿತ್ತು.
ಆದರೆ ಯುಎಸ್ಎ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಮಳೆಯಿಂದ ರದ್ದಾಗಿದ್ದು, ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ. ಇದರೊಂದಿಗೆ ಒಟ್ಟು 5 ಪಾಯಿಂಟ್ಸ್ ಪಡೆದಿರುವ ಯುಎಸ್ಎ ತಂಡವು ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಇನ್ನು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಕೆನಡಾ ವಿರುದ್ಧ ಗೆಲುವು ಸಾಧಿಸಿದರೂ ಒಟ್ಟು 4 ಅಂಕಗಳನ್ನು ಮಾತ್ರ ಹೊಂದಲಿದೆ. ಹಾಗಾಗಿ ಅಂತಿಮ ಪಂದ್ಯಕ್ಕೂ ಮುನ್ನವೇ ಪಾಕ್ ಪಡೆ ಟಿ20 ವಿಶ್ವಕಪ್ನಿಂದ ಹೊರಬಿದ್ದಿರುವುದು ಖಚಿತವಾಗಿದೆ.