ಬೆಂಗಳೂರು: ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ವ್ಯವಹಾರದಲ್ಲಿ ದಂಪತಿಗೆ ವಂಚನೆ, ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪದಡಿ ಕೇಂದ್ರ ಸಚಿವ ವಿ.ಸೋಮಣ್ಣ ಪುತ್ರ ಸೇರಿ ಮೂವರ ಮೇಲೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಸಂಜಯ ನಗರದ ಎಇಸಿಎಸ್ ನಿವಾಸಿ ತೃಪ್ತಿ ಹೆಗಡೆ ಎಂಬುವವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 37ನೇ ಹೆಚ್ಚುವರಿ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಎಫ್ಐಆರ್ ದಾಖಲಾಗಿದೆ.
ದೂರುದಾರರಾದ ತೃಪ್ತಿ ಹಾಗೂ ಮಧ್ವರಾಜ್ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದರು. 2013ರಲ್ಲಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಧ್ವರಾಜ್ ಗೆ ಸಚಿವರ ಪುತ್ರನ ಪರಿಚಯವಾಗಿತ್ತು. 2017ರಲ್ಲಿ ದೂರು ದಾಖಲಾದ ಪುತ್ರಿಯ ಹುಟ್ಟುಹಬ್ಬ ಕಾರ್ಯಕ್ರಮವನ್ನೂ ಮಧ್ವರಾಜ್ ಒಡೆತನದ ಕಂಪನಿ ಆಯೋಜಿಸಿತ್ತು. ಇದರಿಂದ ದೂರು ದಾಖಲಾದ ವ್ಯಕ್ತಿ ಮತ್ತು ಮಧ್ವರಾಜ್ ಜತೆ ಉತ್ತಮ ಬಾಂಧವ್ಯ ಇತ್ತು.
ಹೀಗಾಗಿ ದೂರು ದಾಖಲಾದ ವ್ಯಕ್ತಿ ಮತ್ತು ಮಧ್ವರಾಜ್ ಜಂಟಿಯಾಗಿ ನೈಬರ್ ಹುಡ್ ಎಂಬ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯನ್ನು ಪಾರ್ಟನರ್ ಶಿಪ್ ಡೀಡ್ ಮೇಲೆ ಆರಂಭಿಸಿದ್ದರು. ಕಂಪನಿಯ ಹೂಡಿಕೆ, ಪಾವತಿ ಹಾಗೂ ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿ ಪ್ರಭಾವಿ ಸಚಿವನ ಮಗ ವಹಿಸಿಕೊಂಡಿದ್ದರು.
ಕೆಲ ತಿಂಗಳಲ್ಲಿ ಕಂಪನಿಯ ವ್ಯವಹಾರದಲ್ಲಿ ನಷ್ಟವಾಗಿತ್ತು. ಈ ಹಿನ್ನೆಲೆ ಮಧ್ವರಾಜ್ ಗೆ ಕಂಪನಿಗೆ ರಾಜೀನಾಮೆಗೆ ಒತ್ತಾಯಿಸಿ ಕಿರುಕುಳ, ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಕಂಪನಿಯಲ್ಲಿ ಲಾಸ್ ಆಗಿದ್ದ ಹಣವನ್ನು ನೀಡುವಂತೆ ಬೆದರಿಸಿ, ಹಲ್ಲೆ ಮಾಡಿಸಿ ಮಧ್ವರಾಜ್ ದಂಪತಿಯಿಂದ ವಸೂಲಿ ಮಾಡಿರುವ ಆರೋಪ ಇದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸಂಜಯ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.