ಬೆಂಗಳೂರಿನಲ್ಲಿ IIMB ಮಾಡಿದ್ದ ಸೋಫಿಯಾ ಫಿರ್ದೋಸ್ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬಾರಾಬತಿ- ಕಟಕ್ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಸೋಫಿಯಾ ಫಿರ್ದೋಸ್, ಒಡಿಶಾ ರಾಜಕೀಯ ಇತಿಹಾಸದಲ್ಲಿ ವಿಧಾನಸಭೆ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮೊಹಮ್ಮದ್ ಮೊಕ್ವಿಮ್ ಅವರು ಬಾರಾಬತಿ -ಕಟಕ್ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಮೊಕ್ವಿಮ್ ಅನರ್ಹಗೊಂಡಿದ್ದ ಕಾರಣ ಅವರ ಪುತ್ರಿ ಫಿರ್ದೋಸ್ ಅವರಿಗೆ ಕಾಂಗ್ರೆಸ್ ವಿಧಾನಸಭೆ ಟಿಕೆಟ್ ನೀಡಿತ್ತು.
ಕಳಿಂಗ ವಿಶ್ವವಿದ್ಯಾಲಯದ ಬಿ.ಟೆಕ್ ಪದವೀಧರೆಯಾಗಿರುವ ಫಿರ್ದೋಸ್, 2022ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಧ್ಯಯನ ಮಾಡಿದ್ದರು. ತಂದೆ ಸ್ಥಾಪಿಸಿದ್ದ ಮೆಟ್ರೋ ಬಿಲ್ಡರ್ ಕಂಪನಿಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ತಮ್ಮ ರಿಯಲ್ ಎಸ್ಟೇಟ್ ಸಂಸ್ಥೆ ಮೆಟ್ರೋ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೊಹಮ್ಮದ್ ಮೊಕ್ವಿಮ್, ಒರಿಸ್ಸಾ ಗ್ರಾಮೀಣ ವಸತಿ ಅಭಿವೃದ್ಧಿ ನಿಗಮದ (ಒಆರ್ಎಚ್ಡಿಸಿ) ಸಾಲ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ.
ಈ ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಂಡಿದ್ದರು. ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದ್ದು, ಮೊಕ್ವಿಮ್ ಸ್ಥಾನವನ್ನು ತುಂಬಲು ಯಾವುದೇ ಪ್ರಬಲ ಅಭ್ಯರ್ಥಿ ಸಿಗದ ಕಾರಣ ಕಾಂಗ್ರೆಸ್, 32 ವರ್ಷದ ಸೋಫಿಯಾ ಫಿರ್ದೋಸ್ ಅವರನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಮುಂದಾಯಿತು. ರಿಯಲ್ ಎಸ್ಟೇಟ್ ಡೆವಲಪರ್ ವೃತ್ತಿಯನ್ನು ತೊರೆದ ಸೋಫಿಯಾ ಚುನಾವಣಾ ಅಖಾಡಕ್ಕೆ ಇಳಿದರು.
ಬಿಜೆಪಿಯ ಪೂರ್ಣ ಚಂದ್ರ ಮಹಾಪಾತ್ರ ಅವರನ್ನು 8,001 ಮತಗಳ ಅಂತರದಿಂದ ಸೋಲಿಸುವ ಮೂಲಕ ಒಡಿಶಾ ವಿಧಾನಸಭೆ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. “ನಾನು ರಾಜಕಾರಣಿಯಲ್ಲ. ನನ್ನ ತಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಾಗದಾಗ, 400- 500 ಮಂದಿಯಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ನಮ್ಮ ಮನೆಯಲ್ಲಿ ಸೇರಿದ್ದರು. ನನ್ನ ತಂದೆ ಕಟಕ್ನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಪ್ರಬಲ ನೆಲೆಯನ್ನು ಗುರುತಿಸಿ ನನ್ನನ್ನು ಕಣಕ್ಕೆ ಇಳಿಸುವ ಅವಿರೋಧ ನಿರ್ಧಾರವನ್ನು ತೆಗೆದುಕೊಂಡರು” ಎಂದು ಫಿರ್ದೋಸ್ ತಿಳಿಸಿದ್ದಾರೆ.