ಬೆಳಗ್ಗೆ ಎದ್ದ ಕೂಡಲೇ ಡ್ರೈ ಫ್ರೂಟ್ಸ್ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಎಲ್ಲ ಒಣ ಹಣ್ಣುಗಳೂ ಕೂಡಾ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಒಣಹಣ್ಣುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಬೆಳಗ್ಗೆ ಎದ್ದ ಕೂಡಲೇ ಅವನ್ನು ತಿನ್ನುವುದರಿಂದ ಇವು ನಮ್ಮ ಜೀರ್ಣಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರಬಹುದಂತೆ. ಅಷ್ಟೇ ಅಲ್ಲ, ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಒಡನೆಯೇ ಏರುತ್ತದೆ. ಹೀಗಾಗಿ, ಇವನ್ನು ಬೇರೆ ಹೊತ್ತಿನಲ್ಲಿ ಸೇವಿಸುವುದು ಉಚಿತ. ಬನ್ನಿ, ಯಾವೆಲ್ಲ ಒಣಹಣ್ಣುಗಳನ್ನು ನೀವು ಬೆಳಗ್ಗಿನ ಹೊತ್ತಿನಲ್ಲಿ ಎದ್ದ ಕೂಡಲೇ ತಿನ್ನಬಾರದು ಎಂಬುದನ್ನು ನೋಡೋಣ.
Karnataka Weather : ರಾಜ್ಯದ ಈ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನ ಭಾರೀ ಮಳೆ…
ಒಣದ್ರಾಕ್ಷಿ
ಒಣದ್ರಾಕ್ಷಿ ಅತ್ಯಂತ ಸಿಹಿಯಾದ ಒಣಹಣ್ಣು. ಇದರಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಇದರ ಸೇವನೆಯಿಂದ ಅನೇಕ ಆರೋಗ್ಯಕರ ಲಾಭಗಳಿರುವುದು ನಿಜವಾದರೂ, ಇದನ್ನು ಖಾಲಿ ಹೊಟ್ಟೆಯಲ್ಲಿ ಎದ್ದ ಕೂಡಲೇ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಕೆಲವು ಬೀಜಗಳ ಜೊತೆಗೆ ಇದನ್ನು ಸೇರಿಸಿ ತಿನ್ನಬಹುದಾದರೂ, ಬೆಳಗಿನ ಸೇವನೆ ಅಷ್ಟು ಒಳ್ಳೆಯದಲ್ಲ.
ಒಣ ಅಂಜೂರ:-
ನಾರಿನಂಶ ಅತ್ಯಂತ ಅಧಿಕವಾಗಿರುವ ಒಣ ಅಂಜೂರದ ಹಣ್ಣು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವ ಮಂದಿಗೆ, ಪೋಷಕಾಂಶಗಳ ಕೊರತೆ ಇರುವ ಮಂದಿಗೆ ಇದು ಒಳ್ಳೆಯ ಆಹಾರ. ವಿಟಮಿನ್ಗಳು, ಖನಿಜಾಂಶಗಳು ಇದರಲ್ಲಿ ಹೇರಳವಾಗಿ ಇರುವುದರಿಂದ ಇದೊಂದು ಸಂಪೂರ್ಣ ಆಹಾರ ಕೂಡಾ. ಆದರೆ ಸಕ್ಕರೆಯ ಅಂಶ ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ತಿನ್ನುವುದರಿಂದ ರಕ್ತದಲ್ಲಿ ದಿಢೀರ್ ಸಕ್ಕರೆಯ ಮಟ್ಟ ಏರಿಕೆಯಾಗುವ ಸಂಭವವೂ ಇದೆ. ಜೊತೆಗೆ ಗ್ಯಾಸ್, ಹೊಟ್ಟೆಯುಬ್ಬರದಂತಹ ಸಮಸ್ಯೆಯನ್ನೂ ತಂದೊಡ್ಡಬಹುದು. ಇದಕ್ಕಾಗಿ, ಒಣ ಅಂಜೂರವನ್ನು ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ತಿನ್ನಬಹುದು. ಆದರೂ ಎದ್ದ ಕೂಡಲೇ ತಿನ್ನುವ ಅಭ್ಯಾಸದಿಂದ ದೂರವಿಡುವುದು ಒಳ್ಳೆಯದು
ಖರ್ಜೂರ
ಕಬ್ಬಿಣಾಂಶ ಸೇರಿದಂತೆ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಖರ್ಜೂರ ಕೂಡಾ ಬೆಳಗ್ಗೆ ಎದ್ದ ಕೂಡಲೇ ತಿನ್ನಬಹುದಾದ ಒಣ ಹಣ್ಣಲ್ಲ. ಸಾಕಷ್ಟು ಸಿಹಿಯಾಗಿರುವ ಖರ್ಜೂರವನ್ನು ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯ ಅಂಶ ಏರುವ ಸಾಧ್ಯತೆಗಳೇ ಹೆಚ್ಚು. ಖರ್ಜೂರವನ್ನು ಬೇರೆ ಬೀಜಗಳ ಜೊತೆ ಸೇರಿಸಿ ತಿನ್ನಬಹುದಾದರೂ, ಬೇರೆ ಹೊತ್ತಿನಲ್ಲಿ ತಿನ್ನುವುದು ಉತ್ತಮ
ಒಣ ಆಪ್ರಿಕಾಟ್
ಒಣ ಆಪ್ರಿಕಾಟ್ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳೂ, ಖನಿಜಾಂಶಗಳೂ ಇರುವುದರ ಜೊತೆಗೆ ಸಕ್ಕರೆಯ ಅಂಶವೂ ಸಾಕಷ್ಟಿದೆ. ಬೆಳಗ್ಗೆಯೇ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಇದರ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರಿ ಸಕ್ಕರೆಯ ಅಂಶ ದಿಢೀರ್ ಏರಬಹುದು. ಅಷ್ಟೇ ಅಲ್ಲ, ಜೀರ್ಣದ ಸಮಸ್ಯೆಗಳೂ ಬರಬಹುದು. ಬೇರೆ ಬೀಜಗಳು ಹಾಗೂ ಧಾನ್ಯಗಳ ಜೊತೆಯಲ್ಲಿ ಬೇರೆ ಹೊತ್ತಿನಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು
ಪ್ರೂನ್
ಈ ಒಣಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ಖನಿಜಾಂಶ, ಪೋಷಕಾಂಶಗಳೂ ಇವೆ. ನಾರಿನಂಶವಿರುವುದರಿಂದ ಬೆಳಗಿನ ಹೊತ್ತು ತಿನ್ನುವುದು ಒಳ್ಳೆಯದೇ ಆದರೂ, ಸಕ್ಕರೆ ಹೆಚ್ಚಿರುವುದರಿಂದ ದಿಢೀರ್ ಸಕ್ಕರೆಯ ಮಟ್ಟ ಏರುವ ಅಪಾಯವೂ ಇದೆ. ಹಾಗಾಗಿ, ಬೆಳಗಿನ ಹೊತ್ತು ಇದರಿಂದ ದೂರವಿಡಬಹುದು. ಅಥವಾ ಬೇರೆ ಒಣಬೀಜಗಳ ಜೊತೆಗೆ ಸೇರಿಸಿ ಬೇರೆ ಹೊತ್ತಿನಲ್ಲಿ ತಿನ್ನಬಹುದು