ನ್ಯೂಯಾರ್ಕ್ನ ನಸ್ಸೌ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ನಲ್ಲಿ ಮೊದಲ ಪಂದ್ಯವನ್ನಾಡಲು ಟೀಂ ಇಂಡಿಯಾ ಸಜ್ಜಾಗಿದೆ.
ಪಂದ್ಯದ ಟಾಸ್ ಮುಗಿದಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಐರ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಕೂಡ ಹೊರಬಿದ್ದಿದ್ದು, ಎರಡೂ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದರಂತೆ ಟೀಂ ಇಂಡಿಯಾದಲ್ಲಿ ಯಶಸ್ವಿ ಜೈಸ್ವಾಲ್ , ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್ ಮತ್ತು ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಪ್ಲೇಯಿಂಗ್ 11 ಜೊತೆಗೆ ತಂಡದಲ್ಲಿ ಆರಂಭಿಕರೂ ಸಹ ಬದಲಾಗಿದ್ದಾರೆ. ವಾಸ್ತವವಾಗಿ ಈ ಮೊದಲು ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಇಂದಿನ ಪಂದ್ಯದಲ್ಲಿ ನಾಯಕ ರೋಹಿತ್ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿಯ ಬಡ್ತಿಯಿಂದಾಗಿ ಇತ್ತ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ಗೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಸಿಕ್ಕಿದ್ದು, ಈ ಹಿಂದೆ ಕೊಹ್ಲಿ ಬ್ಯಾಟ್ ಬೀಸುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಪಂತ್ ಆಡಲಿದ್ದಾರೆ.