ನವದೆಹಲಿ: ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿಗೂ ಅಧಿಕ ಜನರು ಮತದಾನ ಮಾಡಿದ್ದು, ಭಾರತ ವಿಶ್ವ ದಾಖಲೆ ಬರೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2024ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನವೇ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಪಿ.ರಾಜೀವ್ ಕುಮಾರ್ ಈ ಬಾರಿ 64.2 ಕೋಟಿಗೂ ಅಧಿಕ ಮತದಾರರು (Voters) ಮತದಾನ ಮಾಡುವ ಮೂಲಕ ಭಾರತ ವಿಶ್ವ ದಾಖಲೆ ಬರೆದಿದೆ. ಜೊತೆಗೆ ಮಹಿಳೆಯರೂ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ದೇಶಾದ್ಯಂತ 64.2 ಕೋಟಿಗೂ ಅಧಿಕ ಜನ ಹಕ್ಕು ಚಲಾಯಿಸಿದ್ದಾರೆ. ಇದು G7 ರಾಷ್ಟ್ರಗಳಿಗಿಂತ 1.5 ಪಟ್ಟು ಹಾಗೂ 27 ಯುರೋಪಿಯನ್ ರಾಷ್ಟ್ರಗಳಿಗಿಂತಲೂ 2.5 ಪಟ್ಟು ಹೆಚ್ಚಾಗಿದೆ.
IAF Recruitment 2024: ಭಾರತೀಯ ವಾಯುಪಡೆಯಲ್ಲಿ ಭರ್ಜರಿ ಉದ್ಯೋಗವಕಾಶ..! ತಿಂಗಳಿಗೆ ಸಂಬಳ 56,000
ಅಲ್ಲದೇ ದೇಶದಲ್ಲಿ 31 ಕೋಟಿ ಮಹಿಳಾ ಮತದಾರರು ಮತ ಚಲಾಯಿಸಿದ್ದು, ಇದೇ ಮೊದಲಬಾರಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ ಎಂದು ಪಿ.ರಾಜೀವ್ ಕುಮಾರ್ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಆಯೋಗದ ಅಧಿಕಾರಿಗಳು ಎದ್ದುನಿಂತು ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದಿಸಿದರು.
2024ರ ಲೋಕಸಭಾ ಚುನಾವಣೆ ಕರ್ತವ್ಯ ನಿರ್ವಹಣೆಗೆ ಸುಮಾರು 4 ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಿಮಾನಗಳನ್ನು ಬಳಸಲಾಗಿದೆ. 39 ಕೇಂದ್ರಗಳಲ್ಲಿ ಮಾತ್ರವೇ ಮರುಮತದಾನ ನಡೆದಿದೆ. ಜಮ್ಮು ಮತ್ತು ಕಾಶ್ಮೀರವು ಕಳೆದ 4 ದಶಕಗಳಲ್ಲಿ ದಾಖಲೆಯ ಶೇ.58.58 ಮತ್ತು ಕಾಶ್ಮೀರದಲ್ಲಿ ಶೇ.51.05 ರಷ್ಟು ಮತದಾನವಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಈ ಬಾರಿ ಡ್ರಗ್ಸ್, ನಗದು, ಚಿನ್ನಾಭರಣ ಸೇರಿ ದಾಖಲೆಯ 10,000 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2019ರಲ್ಲಿ ಇದರ ಪ್ರಮಾಣ 3,500 ಕೋಟಿ ರೂ.ಗಳಷ್ಟಿತ್ತು.