ಬೆಂಗಳೂರು, ಜೂನ್ 1: “ಸಿಎಂ ಹಾಗೂ ತಮ್ಮ ವಿರುದ್ಧ ಕೇರಳದ ದೇವಸ್ಥಾನದ ಸಮೀಪದ ಖಾಸಗಿ ಜಾಗದಲ್ಲಿ ಶತ್ರು ಭೈರವಿ ಯಾಗ ನಡೆಯುತ್ತಿರುವುದಾಗಿ ಹೇಳಿದ್ದೇನೆಯೇ ಹೊರತು ಕೇರಳದ ದೇವಸ್ಥಾನದಲ್ಲಿ ನಡೆಯುತ್ತಿರುವುದಾಗಿ ಹೇಳಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು. ನಗರದ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.
ಕೇರಳದ ದೇವಾಲಯಗಳಲ್ಲಿ ವಾಮಾಚಾರ, ಪ್ರಾಣಿಬಲಿ ನಡೆಯುತ್ತಿಲ್ಲ ಎಂಬ ಕೇರಳ ಸಚಿವೆಯ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, “ನಾನು ದೇವಾಲಯದಲ್ಲಿ ವಾಮಾಚಾರ ನಡೆಯುತ್ತಿದೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕೇರಳ ದೇವರ ನಾಡು. ಅಲ್ಲಿನ ದೇವಾಲಯಗಳ ಬಗ್ಗೆ ನನಗೆ ಅಪಾರ ಗೌರವಿದೆ. ನಾನು ಯಾರ ಭಾವನೆಗಳಿಗೂ ಧಕ್ಕೆಯಾಗುವಂತೆ ನಡೆದುಕೊಂಡಿಲ್ಲ” ಎಂದರು.
Job Alert: ಡಿಗ್ರಿ ಆಗಿದ್ರೆ ಸಾಕು.. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ʼನಲ್ಲಿದೆ ಉದ್ಯೋಗಾವಕಾಶ.!
“ಇತ್ತೀಚೆಗೆ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ನಾನು ರಾಜರಾಜೇಶ್ವರ ದೇವರ ಭಕ್ತ. ಎಲ್ಲಿ ವಾಮಾಚಾರ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ನೀಡಲು ಆ ದೇವಾಲಯದ ಹೆಸರು ಬಳಸಿದೆ. ಅದರ ಆಸುಪಾಸಿನ ಖಾಸಗಿ ಜಾಗದಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ.
ಯಾರು ಈ ಯಾಗದ ಹಿಂದೆ ಇದ್ದಾರೆ ಎಂದು ಈಗ ಬಹಿರಂಗ ಪಡಿಸಲು ನಾನು ಇಚ್ಚಿಸುವುದಿಲ್ಲ. ನನಗೆ ಬಂದ ಮಾಹಿತಿಯನ್ನು ನಿಮಗೆ ನೀಡಿದ್ದೇನೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡುವುದಾಗಿ ಕೇರಳದ ಸಚಿವರು ತಿಳಿಸಿದ್ದು, ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ” ಎಂದು ತಿಳಿಸಿದರು. ಕೇರಳದ ದೇಗುಲಗಳು, ಜನರ ಬಗ್ಗೆ ನನಗೆ ಗೌರವ, ಪ್ರೀತಿ ಇದೆ ಎಂದೂ ಹೇಳಿದರು.